
ನವದೆಹಲಿ: ದೆಹಲಿ ಈಗ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ "ನಿಜವಾದ ಅಭಿವೃದ್ಧಿ ಮಾದರಿ"ಯನ್ನು ಬಯಸುತ್ತಿದೆಯೇ ಹೊರತು ಪ್ರಧಾನಿ ನರೇಂದ್ರ ಮೋದಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ "ಸುಳ್ಳು ಪ್ರಚಾರ ಮತ್ತು ಪಿಆರ್ ಮಾದರಿ"ಯನ್ನಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ.
ಹಣದುಬ್ಬರ, ನಿರುದ್ಯೋಗ, ಮಾಲಿನ್ಯ ಮತ್ತು ಭ್ರಷ್ಟಾಚಾರದಂತಹ ವಿಷಯಗಳನ್ನು ಎತ್ತಿ ತೋರಿಸುವ ವಿಡಿಯೋವನ್ನು ರಾಹುಲ್ ಗಾಂಧಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
"ಕೆಟ್ಟ ನಿರ್ಮಾಣ, ಕೊಳಕು, ಹಣದುಬ್ಬರ, ನಿರುದ್ಯೋಗ, ಮಾಲಿನ್ಯ ಮತ್ತು ಭ್ರಷ್ಟಾಚಾರ - ದೆಹಲಿಯ ಈ ಸತ್ಯವು ಸಾರ್ವಜನಿಕರ ಮುಂದೆ ಇದೆ" ಎಂದು ಲೋಕಸಭೆ ಪ್ರತಿಪಕ್ಷದ ನಾಯಕ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
"ದೆಹಲಿ ಈಗ ಶೀಲಾ ದೀಕ್ಷಿತ್ ಜಿ ಅವರ ನಿಜವಾದ ಅಭಿವೃದ್ಧಿ ಮಾದರಿಯನ್ನು ಬಯಸುತ್ತಿದೆ. ಮೋದಿ ಮತ್ತು ಕೇಜ್ರಿವಾಲ್ ಅವರ ಸುಳ್ಳು ಪ್ರಚಾರ ಮತ್ತು ಪಿಆರ್ ಮಾದರಿಯಲ್ಲ" ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಬುಧವಾರ ಸದರ್ ಬಜಾರ್ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲು ಸಾಧ್ಯವಾಗಿರಲಿಲ್ಲ. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತಪಡಿಸಿಕೊಳ್ಳಬೇಕು ಎಂದು ಸಂದೇಶದ ಮೂಲಕ ಜನರಿಗೆ ಮನವಿ ಮಾಡಿದ್ದರು.
ಅನಾರೋಗ್ಯದ ಕಾರಣ, ರಾಹುಲ್ ಗಾಂಧಿಯವರು ಮಂಗಳವಾರ ಕರ್ನಾಟಕದ ಬೆಳಗಾವಿಯಲ್ಲಿ ನಡೆದ 'ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್' ಕಾರ್ಯಕ್ರಮದಲ್ಲೂ ಭಾಗವಹಿಸಿರಲಿಲ್ಲ.
Advertisement