
ಪುಣೆ: ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಅವರು ನೀಡಿರುವ ಹೇಳಿಕೆಯೊಂದು ವಿವಾದ ಸೃಷ್ಟಿಸಿದೆ.
ಸಚಿವ ನಿತೇಶ್ ರಾಣೆ ಅವರು, ನಟ ಸೈಫ್ ಅಲಿ ಖಾನ್ ಚೂರಿ ಇರಿತ ಪ್ರಕರಣದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಸೈಫ್ ಅಲಿ ಖಾನ್‌ಗೆ ಇರಿತವಾಗಿದ್ದು ನಿಜವೇ? ನಟನೆಯೇ? ಎಂದು ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಅವರು, ಮುಂಬೈನಲ್ಲಿ ಬಾಂಗ್ಲಾದೇಶಿಗಳು ಏನು ಮಾಡುತ್ತಿದ್ದಾರೆ ನೋಡಿ. ಅವರ ಧೈರ್ಯ ನೋಡಿ, ಮೊದಲು ಅವರು ಬೀದಿಗಳಲ್ಲಿ ವಾಸಿಸುತ್ತಿದ್ದರು, ಈಗ ಜನರ ಮನೆಗಳಿಗೆ ಪ್ರವೇಶಿಸುತ್ತಿದ್ದಾರೆ. ಸೈಫ್ ಅಲಿ ಖಾನ್ ಅವರ ಮನೆಗೂ ನುಗ್ಗಿದ್ದಾರೆ. ಬಹುಶಃ ಅವರು ಸೈಫ್ ಅವರನ್ನು ಕರೆದುಕೊಂಡು ಹೋಗಲು ಬಂದಿರಬಹುದು. ಇದು ಒಳ್ಳೆಯ ಬೆಳವಣಿಗೆ, ಕಸ ತೆಗೆಯುವುದು ಒಳ್ಳೆಯದೇ' ಎಂದು ಹೇಳಿದ್ದಾರೆ. ಈ ಮೂಲಕ ಸೈಫ್ ಅಲಿಖಾನ್ ಅವರನ್ನು ಕಸಕ್ಕೆ ಹೋಲಿಸಿ, ವಿವಾದ ಸೃಷ್ಟಿಸಿದ್ದಾರೆ.
ಸೈಫ್ ಆಸ್ಪತ್ರೆಯಿಂದ ಹೊರ ಬರುವ ದೃಶ್ಯವನ್ನು ನೋಡಿದರೆ ಅವರು ನಟಿಸುತ್ತಿದ್ದಾರೆಂಬ ಅನುಮಾನ ವ್ಯಕ್ತವಾಗುತ್ತಿದೆ. ಅವರು ನಡೆಯುವಾಗ ನೃತ್ಯ ಮಾಡುತ್ತಿದ್ದರು. ನೃತ್ಯ ಮಾಡುತ್ತಾ ಮನೆಗೆ ಹೇಗೆ ಹೋಗುತ್ತಾರೆ? ಖಾನ್ ಅಥವಾ ಸೈಫ್ ಅಲಿ ಖಾನ್ ಅವರಂತಹ ನಟರು ಗಾಯಗೊಂಡರೆ ಎಲ್ಲರೂ ಅದರ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾರೆ. ಸುಶಾಂತ್ ಸಿಂಗ್ ರಜಪೂತ್ ಅವರಂತಹ ಹಿಂದೂ ನಟ ಕಿರುಕುಳಕ್ಕೊಳಗಾದಾಗ ಯಾರೂ ಏನನ್ನೂ ಹೇಳಲಿಲ್ಲ. ಅವರ ಪರವಾಗಿ ನಿಲ್ಲಲಿಲ್ಲ. ಯಾಕೆ? ಪ್ರಶ್ನೆ ಮಾಡಿದ್ದಾರೆ.
ಹಿಂದೂ ಕಲಾವಿದರ ಬಗ್ಗೆ ಆ ಮುಂಬ್ರಾದ ಜೀತುದ್ದೀನ್ (ಜಿತೇಂದ್ರ ಅವ್ಹಾದ್), ಬಾರಾಮತಿಯ ತಾಯಿ (ಸುಪ್ರಿಯಾ ಸುಳೆ) ಎಂದಾದರೂ ಚಿಂತಿಸುವುದನ್ನು ನೋಡಿದ್ದೀರಾ?...ಅವರಿಗೆ ಸೈಫ್ ಅಲಿ ಖಾನ್, ಶಾರುಖ್ ಖಾನ್ ಮಗ ಮತ್ತು ನವಾಬ್ ಮಲಿಕ್ ಬಗ್ಗೆ ಮಾತ್ರ ಚಿಂತೆಯಿದೆ. ಈ ಎಲ್ಲಾ ವಿಷಯಗಳ ಬಗ್ಗೆ ಹಿಂದೂಗಳು ಗಮನಹರಿಸಬೇಕು ಎಂದು ಹೇಳಿದರು.
ಕಳೆದ ವಾರ ಸೈಫ್ ಅಲಿ ಖಾನ್ ಅವರ ಬಾಂದ್ರಾ ನಿವಾಸಕ್ಕೆ ನುಗ್ಗಿದ್ದ ದುಷ್ಕರ್ಮಿಯೊಬ್ಬ ಅವರ ಮೇಲೆ ಚೂರಿಯಿಂದ ದಾಳಿ ಮಾಡಿದ್ದ. ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈತ ಬಾಂಗ್ಲಾದೇಶದ ಪ್ರಜೆ ಎಂದು ಹೇಳಲಾಗುತ್ತಿದೆ.
Advertisement