ಪವಾಡ: 13ನೇ ಅಂತಸ್ತಿನಿಂದ ಬಿದ್ದ ಮಗುವಿನ ರೋಚಕ ರಕ್ಷಣೆ! ವಿಡಿಯೋ ವೈರಲ್
ಥಾಣೆ: ಫ್ಲಾಟ್ ವೊಂದರ 13 ನೇ ಅಂತಸ್ತಿನ ಬಾಲ್ಕನಿಂದ ಕೆಳಗೆ ಬಿದ್ದರೂ ಎರಡು ವರ್ಷದ ಮಗುವೊಂದು ಪವಾಡ ಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಕಳೆದ ವಾರ ಡೊಂಬಿವಲಿಯಲ್ಲಿ ದೇವಿಚಪದ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮಗು ಕೆಳಗೆ ಬೀಳುತ್ತಿರುವುದನ್ನು ನೋಡಿದ ವ್ಯಕ್ತಿಯೋರ್ವ ಕೂಡಲೇ ಮಗು ಬೀಳಬಹುದಾದ ಸ್ಥಳಕ್ಕೆ ಧಾವಿಸಿದ್ದು, ಕ್ಯಾಚ್ ಹಿಡಿಯಲು ಯತ್ನಿಸುವ ಮೂಲಕ ಮಗವನ್ನು ರಕ್ಷಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಮಗು ಕಾಪಾಡಿದ ವ್ಯಕ್ತಿ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಅವರನ್ನು ನಿಜ ಜೀವನದ ಹೀರೋ ಎಂದು ನೆಟ್ಟಿಗರು ಕೊಂಡಾಡಿದ್ದಾರೆ. ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಡಿಯೋದಲ್ಲಿ ಭಾವೇಶ್ ಮ್ಹಾತ್ರೆ ಮಗುವನ್ನು ಹಿಡಿಯಲು ಓಡುತ್ತಿರುವುದನ್ನು ಕಾಣಬಹುದಾಗಿದೆ. ಆತ ಮಗು ಎಲ್ಲಿ ಬೀಳುತ್ತದೆ ಎಂಬುದನ್ನು ಗ್ರಹಿಸುವಲ್ಲಿ ವಿಫಲವಾದರೂ ಕ್ಯಾಚ್ ಹಿಡಿಯಲು ಪ್ರಯತ್ನದಲ್ಲಿ ಮಗು ಕೆಳಗೆ ಬಿದ್ದಿದೆ. ಆದರೆ ಸಣ್ಣಪುಟ್ಟ ಗಾಯಗಳೊಂದಿಗೆ ಮಗು ಪ್ರಾಣಾಪಾಯದಿಂದ ಪಾರಾಗಿದೆ. 13ನೇ ಮಹಡಿಯ ಫ್ಲಾಟ್‌ನ ಬಾಲ್ಕನಿಯಲ್ಲಿ ಆಟವಾಡುತ್ತಿದ್ದಾಗ ಮಗು ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.