
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷದ(ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಸಾಮಾಜಿಕ, ಆರ್ಥಿಕ ಮತ್ತು ಮೂಲಸೌಕರ್ಯ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿರುವ 15 ಪ್ರಮುಖ ಭರವಸೆಗಳನ್ನು ನೀಡಿದ್ದಾರೆ.
ಪಕ್ಷದ ಪ್ರಾಣಿಳಿಕೆ ಬಿಡುಗಡೆ ಮಾಡಿ ಮಾತನಾಡಿದ ಕೇಜ್ರಿವಾಲ್ ಅವರು, ದೆಹಲಿಯ ನಿವಾಸಿಗಳ, ವಿಶೇಷವಾಗಿ ಯುವಕರು ಮತ್ತು ಮಹಿಳೆಯರ ಕಲ್ಯಾಣಕ್ಕೆ ಪಕ್ಷದ ಬದ್ಧತೆಯನ್ನು ಒತ್ತಿ ಹೇಳಿದರು.
ರಾಷ್ಟ್ರ ರಾಜಧಾನಿಯಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ, ನಗರದ ಯುವ ಕಾರ್ಯಪಡೆಗೆ ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುವುದು. ದೆಹಲಿಯಲ್ಲಿ ಮಹಿಳೆಯರಿಗೆ ಆರ್ಥಿಕ ಬೆಂಬಲ ನೀಡುವ ಗುರಿಯನ್ನು ಹೊಂದಿರುವ 'ಮಹಿಳಾ ಸಮ್ಮಾನ್ ಯೋಜನೆ'ಯ ಮುಂದುವರಿಯಲಿದೆ ಎಂದು ಘೋಷಿಸಿದರು.
ಪಕ್ಷವು ಅಧಿಕಾರ ಉಳಿಸಿಕೊಂಡರೆ, ಹಿರಿಯ ನಾಗರಿಕರಿಗೆ, ಸಂಜೀವನಿ ಯೋಜನೆ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಮತ್ತು ದೆಹಲಿ ನಿವಾಸಿಗಳಿಗೆ ಮೆಟ್ರೋ ದರದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡುವುದಾಗಿ ಎಎಪಿ ಮುಖ್ಯಸ್ಥರು ಹೇಳಿದರು.
"ಬಿಜೆಪಿ ಅಧಿಕಾರಕ್ಕೆ ಬಂದರೆ, ಜನರ ಮೇಲೆ ಮಾಸಿಕ ಆರ್ಥಿಕ ಹೊರೆ 25,000 ರೂ.ಗಳಷ್ಟು ಹೆಚ್ಚಾಗುತ್ತದೆ" ಎಂದು ಆರೋಪಿಸಿದ ಕೇಜ್ರಿವಾಲ್, ಎಎಪಿಯ ಭರವಸೆ ಆಧಾರಿತ ಆಡಳಿತವನ್ನು ನಕಲು ಮಾಡುತ್ತಿದೆ ಎಂದು ಟೀಕಿಸಿದರು.
"ದೇಶದಲ್ಲಿ ಮೊದಲು ನಾವು 'ಗ್ಯಾರಂಟಿ' ಎಂಬ ಪದವನ್ನು ಸೃಷ್ಟಿಸಿದೆವು. ನಮ್ಮ ನಂತರ, ಬಿಜೆಪಿ ಅದನ್ನು ಕದ್ದಿದೆ, ಆದರೆ ವ್ಯತ್ಯಾಸವೆಂದರೆ, ನಾವು ನಮ್ಮ ಭರವಸೆಗಳನ್ನು ಪೂರೈಸುತ್ತೇವೆ. ಆದರೆ ಅವರು ಭರಲವಸೆ ಈಡೇರಿಸುವುದಿಲ್ಲ" ಎಂದು ಅವರು ಹೇಳಿದರು.
Advertisement