ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಪರೀಕ್ಷೆಗೆ ತಯಾರಾಗುತ್ತಿದ್ದ ವಿದ್ಯಾರ್ಥಿನಿ ಮೇಲೆ ಕೋತಿಗಳ ದಾಳಿ; ತಪ್ಪಿಸಿಕೊಳ್ಳಲು ಯತ್ನಿಸಿ ಛಾವಣಿಯಿಂದ ಬಿದ್ದು ಸಾವು

ಸಂತ್ರಸ್ತೆಯನ್ನು ಪ್ರಿಯಾ ಕುಮಾರಿ ಎಂದು ಗುರುತಿಸಲಾಗಿದ್ದು, ಮುಂದಿನ ತಿಂಗಳು ನಡೆಯಲಿರುವ ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಭಗವಾನ್‌ಪುರ ಪೊಲೀಸ್ ವ್ಯಾಪ್ತಿಗೆ ಒಳಪಡುವ ಮಘರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
Published on

ಪಾಟ್ನಾ: ಕೋತಿಗಳ ಗುಂಪೊಂದು ದಾಳಿ ಮಾಡಿದ್ದು, ಛಾವಣಿ ಮೇಲೆ ನಿಂತಿದ್ದ 10 ನೇ ತರಗತಿ ವಿದ್ಯಾರ್ಥಿನಿ ಕೆಳಗೆ ಬಿದ್ದು ಸಾವಿಗೀಡಾಗಿರುವ ಆತಂಕಕಾರಿ ಘಟನೆ ಬಿಹಾರದ ಸಿವಾನ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಸಂತ್ರಸ್ತೆಯನ್ನು ಪ್ರಿಯಾ ಕುಮಾರಿ ಎಂದು ಗುರುತಿಸಲಾಗಿದ್ದು, ಮುಂದಿನ ತಿಂಗಳು ನಡೆಯಲಿರುವ ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಭಗವಾನ್‌ಪುರ ಪೊಲೀಸ್ ವ್ಯಾಪ್ತಿಗೆ ಒಳಪಡುವ ಮಘರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಏಕಾಏಕಿ ಛಾವಣಿಯಲ್ಲಿ ಕಾಣಿಸಿಕೊಂಡ ಕೋತಿಗಳ ಗುಂಪು ಆಕೆಯ ಮೇಲೆ ದಾಳಿ ಮಾಡಿದ್ದು, ಆಕೆ ಕೆಳಗೆ ಬಿದ್ದಿದ್ದಾಳೆ.

ಒಂಟಿಯಾಗಿದ್ದ ಪ್ರಿಯಾ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಪ್ರಿಯಾಳ ಕೂಗಾಟ ಕೇಳಿದ ನಂತರ ಕೆಲವು ನೆರೆಹೊರೆಯವರು ಕಟ್ಟಡದ ಹೊರಗೆ ಜಮಾಯಿಸಿ ಕೋತಿಗಳ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಪ್ರಿಯಾ ಮೆಟ್ಟಿಲುಗಳತ್ತ ಓಡಿದ್ದಾಳೆ. ದುರದೃಷ್ಟವಶಾತ್, ಒಂದು ಕೋತಿ ಆಕೆಯ ಮೇಲೆ ಹಾರಿದೆ ಮತ್ತು ಆಕೆಯನ್ನು ತಳ್ಳಿದೆ. ಕೆಳಗೆ ಬಿದ್ದ ಪ್ರಿಯಾಳ ತಲೆಯ ಹಿಂಭಾಗಕ್ಕೆ ಗಂಭೀರವಾದ ಗಾಯವಾಗಿದೆ. ಕೂಡಲೇ ಆಕೆಯನ್ನು ಸಿವಾನ್ ಸದರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟೊತ್ತಿಗಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಕೋತಿಗಳ ಹಿಂಡು ದಾಳಿ ಮಾಡಿದ ವಿಚಾರ ತಿಳಿದ ನಂತರ ಸಂತ್ರಸ್ತೆಯ ಮನೆಗೆ ಪೊಲೀಸರ ತಂಡವನ್ನು ಕಳುಹಿಸಲಾಗಿದೆ ಎಂದು ಭಗವಾಂಗಂಜ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಸುರ್ಜೀತ್ ಕುಮಾರ್ ಚೌಧರಿ ಹೇಳಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ಕುಟುಂಬಸ್ಥರು ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು.

ಘಟನೆಯು ಸ್ಥಳೀಯ ನಿವಾಸಿಗಳಲ್ಲಿ ಆಘಾತ ಉಂಟುಮಾಡಿದ್ದು, ಕೋತಿಗಳ ಹಾವಳಿಯನ್ನು ತಪ್ಪಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಮಂಗಗಳು ಮಕ್ಕಳಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಹಲವು ಬಾರಿ ದೂರು ನೀಡಿದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.

'ಜಿಲ್ಲಾಡಳಿತದ ನಿರಾಸಕ್ತಿಯಿಂದ ಬಾಲಕಿಯೊಬ್ಬಳು ಸಾವಿಗೀಡಾಗಿರುವ ದುರದೃಷ್ಟಕರ ಘಟನೆ ನಡೆದಿದೆ. ಆಡಳಿತವು ಕ್ರಮಕೈಗೊಂಡಿದ್ದರೆ, ಈ ಘಟನೆಯನ್ನು ತಪ್ಪಿಸಬಹುದಿತ್ತು. ಪ್ರಿಯಾ ಇಂದು ಬದುಕಿರುತ್ತಿದ್ದಳು' ಎಂದು ನಿವಾಸಿ ಭಾರತಿ ದೇವಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com