
ಪ್ರಯಾಗ್ ರಾಜ್: ಕುಂಭಮೇಳ ಎಂಬುದು ಇದೀಗ ಮುಸ್ಲಿಂ-ಹಿಂದೂ ವಿಚಾರವಾಗಿ ಉಳಿದಿಲ್ಲ.. ಇದು ನಮ್ಮ ದೇಶ, ನಾಗರಿಕತೆಯ ಮೂಲವಾಗಿದೆ ಎಂದು ಖ್ಯಾತ ಬಾಲಿವುಡ್ ಚಿತ್ರ ನಿರ್ದೇಶಕ ಕಬೀರ್ ಖಾನ್ ಹೇಳಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳ ಕೇವಲ ಹಿಂದೂಗಳು ಮಾತ್ರವಲ್ಲ.. ಕ್ರಿಶ್ಚಿಯನ್-ಮುಸ್ಲೀಮರು ಎಂಬ ಮತ ಬೇದಗಳಿಲ್ಲದೇ ಎಲ್ಲ ಧರ್ಮೀಯರನ್ನು ಸೆಳೆಯುತ್ತಿದೆ. ಈ ಹಿಂದೆ ಖ್ಯಾತ ಬಾಲಿವುಡ್ ಕೊರಿಯೋ ಗ್ರಾಫರ್ ರೆಮೋ ಡಿಸೋಜಾ ಪವಿತ್ರ ಸ್ನಾನ ಮಾಡಿ ಸುದ್ದಿಗೆ ಗ್ರಾಸವಾಗಿದ್ದರು. ಬಳಿಕ ಖ್ಯಾತ ಅಥ್ಲೀಟ್ ಮೇರಿಕೋಮ್ ಕೂಡ ಪವಿತ್ರ ಸ್ನಾನ ಮಾಡಿದ್ದರು. ಈ ಸೆಲೆಬ್ರಿಟಿಗಳ ಪಟ್ಟಿಗೆ ಇದೀಗ ಬಾಲಿವುಡ್ ನ ಖ್ಯಾತ ನಿರ್ದೇಶಕ ಕಬೀರ್ ಖಾನ್ ಸೇರ್ಪಡೆ ಆಗಿದ್ದಾರೆ.
ಪವಿತ್ರ ಸ್ನಾನ ಮಾಡಲು ಮಹಾ ಕುಂಭ ಮೇಳ ನಡೆಯುತ್ತಿರುವ ಪ್ರಯಾಗ್‌ರಾಜ್‌ಗೆ ಬಂದಿಳಿದಿರುವ ಕಬೀರ್ ಖಾನ್ ಈ ವೇಳೆ ತಮಗೆ ಸಿಕ್ಕ ಸುದ್ದಿಗಾರರೊಂದಿಗೆ ಮಾತನಾಡಿದರು. 'ಕುಂಭಮೇಳ ಎಂಬುದು ಇದೀಗ ಮುಸ್ಲಿಂ-ಹಿಂದೂ ವಿಚಾರವಾಗಿ ಉಳಿದಿಲ್ಲ.. ಇದು ನಮ್ಮ ದೇಶ, ನಾಗರಿಕತೆಯ ಮೂಲವಾಗಿದೆ ಎಂದರು.
'ನಾನು ತುಂಬಾ ಉತ್ಸುಕನಾಗಿದ್ದೇನೆ. ಇದು 12 ವರ್ಷಗಳಿಗೊಮ್ಮೆ ಸಂಭವಿಸುತ್ತದೆ. ಇಲ್ಲಿಗೆ ಬಂದಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ನಾನು ಕೂಡ ಇಲ್ಲಿ ಪವಿತ್ರ ಸ್ನಾನ ಮಾಡುತ್ತೇನೆ. ಇದು ಹಿಂದೂಗಳು ಮತ್ತು ಮುಸ್ಲಿಮರ ಬಗ್ಗೆ ಅಲ್ಲ, ಇವು ನಮ್ಮ ಮೂಲ, ನಮ್ಮ ದೇಶ ಮತ್ತು ನಮ್ಮ ನಾಗರಿಕತೆಯ ವಿಷಯಗಳಾಗಿವೆ. ಇದರಲ್ಲಿ ಹಿಂದೂ ಅಥವಾ ಮುಸ್ಲಿಂ ಎಂಬ ಅಂಶವೇ ಬರುವುದಿಲ್ಲ, ನೀವು ಭಾರತೀಯರೆಂದು ನೀವು ನಂಬಿದರೆ, ನೀವು ಎಲ್ಲವನ್ನೂ ಅನುಭವಿಸಬೇಕು. ನಾನು ಕೂಡ ಇಲ್ಲಿ ಪವಿತ್ರ ಸ್ನಾನ ಮಾಡುತ್ತೇನೆ ಎಂದು ಕಬೀರ್ ಖಾನ್ ಹೇಳಿದ್ದಾರೆ.
ಒಂದೇ ದಿನ 15 ಕೋಟಿ ಜನರಿಂದ ಪವಿತ್ರ ಸ್ನಾನ
ಇನ್ನು ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ನಾಳೆ ಒಂದೇ ದಿನ ಬರೊಬ್ಬರಿ 15 ಕೋಟಿ ಜನ ಪವಿತ್ರ ಸ್ನಾನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸುಮಾರು 15 ಕೋಟಿ ಜನ ನಾಳಿನ ಪವಿತ್ರ ಸ್ನಾನಕ್ಕಾಗಿ ಆಗಮಿಸುತ್ತಿದ್ದಾರೆ. ಅವರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಬರುತ್ತಾರೆ. ಮಂಗಳವಾರ ಬೆಳಿಗ್ಗೆ 8 ಗಂಟೆಯ ಹೊತ್ತಿಗೆ, 1 ಮಿಲಿಯನ್ ಕಲ್ಪವಾಸಿಗಳು (ಸಾಧು ಸನ್ಯಾಸಿಗಳು) ಸೇರಿದಂತೆ 4.55 ಮಿಲಿಯನ್‌ಗಿಂತಲೂ ಹೆಚ್ಚು ಜನರು ಗಂಗಾ ಮತ್ತು ಯಮುನಾ ನದಿಗಳ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಮಾಹಿತಿ ಇಲಾಖೆ ತಿಳಿಸಿದೆ.
Advertisement