
ಥಾಣೆ: ಜನವರಿ 16ರಂದು ನಡೆದ ಖ್ಯಾತ ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲಿನ ಚಾಕು ಇರಿತ ಪ್ರಕರಣದಲ್ಲಿ ಶಂಕಿತ ಆರೋಪಿಯಾಗಿ ಛತ್ತೀಸ್‌ಗಢದ ದುರ್ಗ್‌ನಲ್ಲಿ ಬಂಧಿತನಾಗಿದ್ದ ವ್ಯಕ್ತಿಯ ತಂದೆ ಸೋಮವಾರ ಮುಂಬೈ ಪೊಲೀಸರಿಂದ 'ನನ್ನ ಮಗನ ಜೀವನ ಹಾಳಾಗಿದೆ' ಎಂದು ಟೀಕಿಸಿದ್ದಾರೆ.
ಮುಂಬೈ ಪೊಲೀಸರ ಸುಳಿವಿನ ಮೇರೆಗೆ ರೈಲ್ವೆ ಸಂರಕ್ಷಣಾ ಪಡೆ ಜನವರಿ 18ರಂದು ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಸ್-ಕೋಲ್ಕತ್ತಾ ಶಾಲಿಮಾರ್ ಜ್ಞಾನೇಶ್ವರಿ ಎಕ್ಸ್‌ಪ್ರೆಸ್‌ನಿಂದ ದುರ್ಗ್ ನಿಲ್ದಾಣದಲ್ಲಿ ಚಾಲಕ ಆಕಾಶ್ ಕನೋಜಿಯಾ (31) ಎಂಬುವವರನ್ನು ಬಂಧಿಸಿತ್ತು.
ಜನವರಿ 19ರ ಬೆಳಿಗ್ಗೆ ಮುಂಬೈ ಪೊಲೀಸರು ಬಾಂಗ್ಲಾದೇಶದ ಪ್ರಜೆ ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ ಅಲಿಯಾಸ್ ವಿಜಯ್ ದಾಸ್ ಎಂಬಾತನನ್ನು ಥಾಣೆಯಲ್ಲಿ ಬಂಧಿಸಿದ್ದರು. ಅದಾದ ಬಳಿಕ ದುರ್ಗ್ ಆರ್‌ಪಿಎಫ್ ಕನೋಜಿಯಾ ಅವರನ್ನು ಬಿಡುಗಡೆ ಮಾಡಿತ್ತು.
ಕನೋಜಿಯಾ ಅವರು ಥಾಣೆ ಜಿಲ್ಲೆಯ ಟಿಟ್ವಾಲಾದ ಇಂದಿರಾನಗರ ಚಾಲ್ ನಿವಾಸಿಯಾಗಿದ್ದಾರೆ.
'ಪೊಲೀಸರು ನನ್ನ ಮಗನ ಗುರುತನ್ನು ಪರಿಶೀಲಿಸದೆ ಬಂಧಿಸಿದ್ದಾರೆ. ಈ ತಪ್ಪು ಅವನ ಜೀವನವನ್ನು ಹಾಳುಮಾಡಿದೆ. ಮಾನಸಿಕ ಆಘಾತದಿಂದಾಗಿ, ಆಕಾಶ್ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಅಥವಾ ಕುಟುಂಬದೊಂದಿಗೆ ಮಾತುಕತೆ ನಡೆಸಲು ಸಾಧ್ಯವಾಗುತ್ತಿಲ್ಲ. ಆತ ಎಲ್ಲರಿಂದ ಹಿಂದೆ ಸರಿಯುತ್ತಿದ್ದಾನೆ, ಸರಿಯಾಗಿ ಮಾತನಾಡುತ್ತಿಲ್ಲ ಮತ್ತು ಎಲ್ಲ ಪ್ರೇರಣೆಯನ್ನು ಕಳೆದುಕೊಂಡಿದ್ದಾನೆ' ಎಂದು ಅವರ ತಂದೆ ಕೈಲಾಶ್ ಕನೋಜಿಯಾ ಹೇಳಿದ್ದಾರೆ.
'ನನ್ನ ಮಗ ಮತ್ತು ನಿಜವಾದ ಆರೋಪಿಯ ನಡುವೆ ಯಾವುದೇ ಸಾಮ್ಯತೆ ಇಲ್ಲ ಎಂದು ಜನರು ಹೇಳುತ್ತಿದ್ದಾರೆ. ಆತ ಕೆಲಸ ಕಳೆದುಕೊಂಡನು ಮತ್ತು ಮದುವೆ ರದ್ದಾಯಿತು. ಇದಕ್ಕೆಲ್ಲಾ ಯಾರು ಹೊಣೆ? ಪೊಲೀಸರ ವರ್ತನೆಯು ಆಕಾಶ್‌ನ ಭವಿಷ್ಯವನ್ನು ನಾಶಪಡಿಸಿದೆ' ಎಂದು ದೂರಿದರು.
Advertisement