
ಹರ್ಪಾಲ್ಪುರ: ಮಹಾಕುಂಭ ಮೇಳ ವಿಶೇಷ ರೈಲಿನ ಮೇಲೆ ಕಲ್ಲು ತೂರಾಟ ನಡೆದಿರುವ ಘಟನೆ ಮಂಗಳವಾರ ವರದಿಯಾಗಿದ್ದು, ರೈಲಿನ ಬಾಗಿಲುಗಳು ಬಂದ್ ಆದ ಹಿನ್ನಯಲ್ಲಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಝಾನ್ಸಿಯಿಂದ ಪ್ರಯಾರಾಜ್‌ಗೆ ಪ್ರಯಾಣಿಸುತ್ತಿದ್ದ ವಿಶೇಷ ರೈಲಿನಲ್ಲಿ ಹರ್ಪಾಲ್‌ಪುರ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿ ಕಲ್ಲು ತೂರಾಟ ನಡೆದಿದೆ. ರೈಲು ಹತ್ತಲು ಕಾಯುತ್ತಿದ್ದ ಪ್ರಯಾಣಿಕರು ಬೋಗಿಗಳ ಬಾಗಿಲುಗಳು ಲಾಕ್ ಆಗಿರುವುದನ್ನು ಕಂಡು ಆಕ್ರೋಶಗೊಂಡಿದ್ದಾರೆ. ಬಾಗಿಲು ತೆಗೆಯಿರಿ ನಾವು ಹತ್ತಬೇಕು ಎಂದು ಹೇಳಿದರೂ ಯಾರೂ ಕೂಡ ಬಾಗಿಲು ತೆರೆದಿಲ್ಲ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ಕಲ್ಲು ತೂರಾಟ ನಡೆಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತ ವಿಡಿಯೋ ಪ್ರಸಾರವಾಗುತ್ತಿದ್ದು, ವೀಡಿಯೊಗಳಲ್ಲಿ ಆಕ್ರೋಶಿತರು ರೈಲಿನ ಮೇಲೆ ಕಲ್ಲು ಎಸೆದು ಅದರ ಕಿಟಕಿಗಳನ್ನು ಒಡೆದುಹಾಕುತ್ತಿರುವುದನ್ನು ತೋರಿಸಲಾಗಿದೆ. ಈ ವೇಳೆ ರೈಲಿನಲ್ಲಿದ್ದ ಇತರೆ ಪ್ರಯಾಣಿಕರು ಭಯದಿಂದ ಕಿರುಚುತ್ತಿದ್ದಾರೆ.
ಅತಿಯಾದ ಜನ
ಇನ್ನು ಪ್ರಯಾರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಕ್ಕಾಗಿ ಈ ವಿಶೇಷ ರೈಲನ್ನು ಓಡಿಸಲಾಗುತ್ತಿದೆ. ಇದು ದೇಶಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ ಕುಂಭಮೇಳಕ್ಕೆ ಹೋಗುವ ರೈಲುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಹತ್ತುತ್ತಿರುವುದರಿಂದ ರೈಲಿನಲ್ಲಿ ಸ್ಥಳಾವಕಾಶದ ಕೊರತೆ ಎದುರಾಗುತ್ತಿದೆ. ಇದೇ ಕಾರಣಕ್ಕೆ ಕೆಲ ಕಿಡಿಗೇಡಿಗಳು ರೈಲು ನಿಲ್ದಾಣ ತಲುಪಿದರೂ ರೈಲಿನ ಬಾಗಿಲುಗಳನ್ನು ಬಂದ್ ಮಾಡುತ್ತಿದ್ದಾರೆ. ಇದು ಇತರೆ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಹರ್ಪಾಲ್‌ಪುರ ಪೊಲೀಸ್ ಠಾಣೆಯ ಉಸ್ತುವಾರಿ ಪುಷ್ಪಕ್ ಶರ್ಮಾ ಅವರು ಮಾತನಾಡಿ, 'ರೈಲು ಬೆಳಗಿನ ಜಾವ 2 ಗಂಟೆ ಸುಮಾರಿಗೆ ರೈಲು ನಿಲ್ದಾಣ ತಲುಪಿತು. ಈ ವೇಳೆ ಕೆಲವರು ರೈಲು ಹತ್ತಲು ಯತ್ನಿಸಿದ್ದಾರೆ. ಆದರೆ ಬಾಗಿಲುಗಳು ಲಾಕ್ ಆಗಿದ್ದರಿಂದ ಆಕ್ರೋಶಗೊಂಡು ಕಲ್ಲುಗಳನ್ನು ಎಸೆದರು. ರೈಲ್ವೆ ಪೊಲೀಸರು ಶೀಘ್ರದಲ್ಲೇ ಸ್ಥಳಕ್ಕೆ ತಲುಪಿ ಜನರನ್ನು ಶಾಂತಗೊಳಿಸಿ ಅವರನ್ನು ಪ್ರಯಾಣಕ್ಕೆ ಕಳುಹಿಸಿದರು ಎಂದು ಹೇಳಿದರು.
"ಪ್ರಯಾಗ್‌ರಾಜ್‌ಗೆ ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಮತ್ತು ಅಂತಹ ಘಟನೆಗಳು ಪುನರಾವರ್ತನೆಯಾಗದಂತೆ ಸಹಕರಿಸುವಂತೆ ನಾವು ಪ್ರಯಾಣಿಕರಿಗೆ ಮನವಿ ಮಾಡಲು ಬಯಸುತ್ತೇವೆ. ಇದಕ್ಕಾಗಿ ನಾವು ವಿಶೇಷ ರೈಲುಗಳನ್ನು ಓಡಿಸುತ್ತಿದ್ದೇವೆ" ಎಂದು ರೈಲ್ವೆ ವಕ್ತಾರ ಮನೋಜ್ ಸಿಂಗ್ ಹೇಳಿದರು.
ಕಿಡಿಗೇಡಿಗಳ ದುಷ್ಕೃತ್ಯ
ಮತ್ತೊಂದೆಡೆ ಕೆಲ ಕಿಡಿಗೇಡಿಗಳು ಮಹಾಕುಂಭ ಮೇಳ ವಿಶೇಷ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
Advertisement