
ಚಂಡೀಗಢ: ಯಮುನಾ ನದಿ ನೀರಿಗೆ ಆಡಳಿತಾರೂಢ ಬಿಜೆಪಿ ವಿಷ ಬೆರೆಸುತ್ತಿದೆ ಎಂದು ಆರೋಪಿಸಿರುವ ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ವಿರುದ್ಧ ಗಂಭೀರ ಕ್ರಮಕ್ಕೆ ಮುಂದಾಗಿರುವ ಹರ್ಯಾಣ ಸರ್ಕಾರ ಇದೀಗ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಲು ಮುಂದಾಗಿದೆ.
'ಯಮುನಾ ನದಿಯಲ್ಲಿ ವಿಷ' ಬೆರೆಸಲಾಗಿದೆ ಎಂಬ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅವರ ವಿರುದ್ಧ ಪ್ರಕರಣ ದಾಖಲಿಸಲಿದೆ ಎಂದು ಹರಿಯಾಣ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ವಿಪುಲ್ ಗೋಯಲ್ ಬುಧವಾರ ಹೇಳಿದ್ದಾರೆ.
ಜನರಲ್ಲಿ ಭೀತಿ ಮೂಡಿಸುವ ಗುರಿಯನ್ನು ಹೊಂದಿರುವ ಬೇಜವಾಬ್ದಾರಿ ಹೇಳಿಕೆ ಇದಾಗಿದೆ. ಕೇಜ್ರಿವಾಲ್ ದೆಹಲಿ ಮತ್ತು ಹರಿಯಾಣದ ಜನರಲ್ಲಿ ಭೀತಿ ಮೂಡಿಸುವ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಹರಿಯಾಣ ಸರ್ಕಾರವು ಅವರ ವಿರುದ್ಧ ಸೋನಿಪತ್‌ನ ಸಿಜೆಎಂ ನ್ಯಾಯಾಲಯದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 2 (ಡಿ) ಮತ್ತು 54 ರ ಅಡಿಯಲ್ಲಿ ಪ್ರಕರಣ ದಾಖಲಿಸಲಿದೆ" ಎಂದು ಗೋಯಲ್ ಚಂಡೀಗಢದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಇದೇ ವೇಳೆ ದೆಹಲಿಯ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್ ರನ್ನು ಟೀಕಿಸಿದ ಗೋಯಲ್, 'ಅವರು ಹೇಗೆ 'ಅಂತಹ ದೊಡ್ಡ ಸುಳ್ಳು' ಮಾತನಾಡುತ್ತಿದ್ದಾರೆ? ನಾವು ಅವರಿಗೆ (ದೆಹಲಿಗೆ) ಯಾವ ರೀತಿಯ ನೀರು ನೀಡುತ್ತಿದ್ದೇವೆ ಎಂಬುದು ಜನರಿಗೇ ತಿಳಿದಿದೆ. ನಮ್ಮ ಎಲ್ಲಾ ಅಧಿಕಾರಿಗಳು ಸರಬರಾಜು ಮಾಡಲಾಗುತ್ತಿರುವ ನೀರನ್ನು ಪರಿಶೀಲಿಸಿದ್ದಾರೆ" ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ಕೂಡ ಟೀಕೆ
ಇನ್ನು ಇದೇ ವಿಚಾರವಾಗಿ ಎಎಪಿ ಮತ್ತು ಕೇಜ್ರಿವಾಲ್ ವಿರುದ್ಧ ಟೀಕೆ ಮಾಡಿದ್ದ ಪ್ರಧಾನಿ ಮೋದಿ, 'ಎಎಪಿ ನಾಯಕರು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಭಯದಿಂದ ಹತಾಶರಾಗಿದ್ದಾರೆ. ಹರಿಯಾಣದ ಜನರ ವಿರುದ್ಧ ಮಾಜಿ ಮುಖ್ಯಮಂತ್ರಿಯೊಬ್ಬರು ದುರುದ್ದೇಶಪೂರಿತ ಆರೋಪಗಳನ್ನು ಮಾಡಿದ್ದಾರೆ. ಸೋಲಿನ ಭಯದಿಂದಾಗಿ ಎಎಪಿ ನಾಯಕರು ಅರ್ಥಹೀನ ಆರೋಪ ಮಾಡಿದ್ದಾರೆ. ಹರಿಯಾಣ ದೆಹಲಿಗಿಂತ ಭಿನ್ನವಾಗಿದೆಯೇ? ಅವರಿಗೆ ದೆಹಲಿಯಲ್ಲಿ ಮಕ್ಕಳು ಮತ್ತು ಸಂಬಂಧಿಕರಿಲ್ಲವೇ? ಅವರು ತಮ್ಮ ಸ್ವಂತ ಜನರಿಗೆ ವಿಷ ಬೆರೆಸುತ್ತಾರೆಯೇ?" ಎಂದು ಮೋದಿ ಕೇಜ್ರಿವಾಲ್ ಅವರನ್ನು ಟೀಕಿಸಿದರು.
ದೆಹಲಿಯ ಜನರು, ರಾಯಭಾರ ಕಚೇರಿಗಳಲ್ಲಿರುವ ರಾಜತಾಂತ್ರಿಕರು ಮತ್ತು ರಾಷ್ಟ್ರ ರಾಜಧಾನಿಯಲ್ಲಿ ವಾಸಿಸುವ ನ್ಯಾಯಾಧೀಶರು ಹರಿಯಾಣದ ಜನರು ಒಂದೇ ನೀರನ್ನು ಕುಡಿಯುತ್ತಾರೆ ಎಂದು ಅವರು ಹೇಳಿದರು.
ಕೇಜ್ರಿವಾಲ್ ಆರೋಪವೇನು?
ಕೊಳಕು ರಾಜಕೀಯದಲ್ಲಿ ತೊಡಗಿರುವ ಬಿಜೆಪಿ ಸರ್ಕಾರ ದೆಹಲಿಯ ಜನರನ್ನು ದಾಹದಿಂದ ಇರುವಂತೆ ಮಾಡಲು ಪ್ರಯತ್ನಿಸುತ್ತಿದೆ. ಹರಿಯಾಣದ ಆಡಳಿತಾರೂಢ ಬಿಜೆಪಿ ನೀರಿನಲ್ಲಿ ವಿಷ ಬೆರೆಸಿ ದೆಹಲಿಗೆ ಕಳುಹಿಸುತ್ತಿದೆ. ದೆಹಲಿಯ ಜನರು ಈ ನೀರನ್ನು ಕುಡಿದರೆ ಅನೇಕರು ಸಾಯುತ್ತಾರೆ. ಇದಕ್ಕಿಂತ ಅಸಹ್ಯ ಇನ್ನೇನಿದೆ ಎಂದು ಅರವಿಂದ ಕೇಜ್ರಿವಾಲ್ ಆರೋಪಿಸಿದ್ದರು. ಅಲ್ಲದೆ ಹರಿಯಾಣ ಸರ್ಕಾರ ಉದ್ದೇಶಪೂರ್ವಕವಾಗಿ ಕೈಗಾರಿಕಾ ತ್ಯಾಜ್ಯವನ್ನು ಯಮುನಾ ನದಿಗೆ ಹರಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅತಿಶಿ ಹೇಳಿದ್ದರು.
Advertisement