
ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಇತ್ತೀಚೆಗೆ ಸನ್ಯಾಸತ್ವ ಸ್ವೀಕರಿಸಿದ್ದ ಬಾಲಿವುಡ್ ನಟಿ ಮಮತಾ ಕುಲಕರ್ಣಿಗೆ ಆಘಾತ ಎದುರಾಗಿದ್ದು, ಆಕೆಗೆ ಸನ್ಯಾಸ್ಯತ್ವ ನೀಡಿದ್ದ ಕಿನ್ನರ್ ಅಖಾಡವೇ ನಟಿಯನ್ನು ವಜಾಗೊಳಿಸಿದೆ.
ಅಚ್ಚರಿಯಾದರೂ ಇದು ಸತ್ಯ.. ಲೌಕಿಕ ಬದುಕಿಗೆ ವಿದಾಯ ಹೇಳಿ ಸನ್ಯಾಸ್ಯತ್ವ ಸ್ವೀಕರಿಸಿದ್ದ ಮಮತಾ ಕುಲಕರ್ಣಿಯನ್ನು ಕಿನ್ನರ್ ಅಖಾಡ ವಜಾಗೊಳಿಸಿದೆ. ಮಮತಾ ಕುಲಕರ್ಣಿ ಮಾತ್ರವಲ್ಲದೇ ಲಕ್ಷ್ಮಿ ನಾರಾಯಣ್ ತ್ರಿಪಾಠಿಯನ್ನು ಕೂಡ ಅಖಾಡದಿಂದ ವಜಾಗೊಳಿಸಲಾಗಿದೆ. ಕಿನ್ನರ ಅಖಾಡ ಸ್ಥಾಪಕ ರಿಷಿ ಅಜಯ್ ದಾಸ್ ಶುಕ್ರವಾರ ಮಮತಾ ಕುಲಕರ್ಣಿ ಅವರನ್ನು ಅಖಾಡದಿಂದಲೇ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಿನ್ನರ್ ಅಖಾಡದ ಸಂಸ್ಥಾಪಕ ಅಜಯ್ ದಾಸ್, ಕಿನ್ನರ್ ಅಖಾಡವನ್ನು ಹೊಸದಾಗಿ ಮರುಸಂಘಟಿಸಲಾಗುವುದು. ಅಲ್ಲದೆ, ನೂತನ ಆಚಾರ್ಯ ಮಹಾಮಂಡಲೇಶ್ವರರನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಅಜಯ್ ದಾಸ್ ಶುಕ್ರವಾರ ಘೋಷಿಸಿದ್ದಾರೆ.
ವಿವಾದ
ಮಮತಾ ಕುಲಕರ್ಣಿ ಅವರನ್ನು ಕಿನ್ನರ ಅಖಾಡದ ಮಹಾಮಂಡಲೇಶ್ವರಿಯನ್ನಾಗಿ ಮಾಡಿದಂದಿನಿಂದ ಒಂದಲ್ಲೊಂದು ವಿವಾದ ನಡೆಯುತ್ತಿದೆ. ಇದೀಗ ಕಿನ್ನರ್ ಅಖಾಡದ ಸಂಸ್ಥಾಪಕ ಅಜಯ್ ದಾಸ್ ಅವರು ಮಮತಾ ಕುಲಕರ್ಣಿ ಅವರನ್ನು ಕಿನ್ನರ ಅಖಾಡದ ಮಹಾಮಂಡಲೇಶ್ವರ ಹುದ್ದೆಯಿಂದ, ಲಕ್ಷ್ಮೀ ನಾರಾಯಣ ತ್ರಿಪಾಠಿ ಅವರನ್ನು ಆಚಾರ್ಯ ಮಹಾಮಂಡಲೇಶ್ವರ ಹುದ್ದೆಯಿಂದ ಉಚ್ಚಾಟನೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
'ದೇಶದ್ರೋಹ' ಕಾರಣ?
90ರ ದಶಕದಲ್ಲಿ ಬಾಲಿವುಡ್ ಸೇರಿದಂತೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದ ಮಮತಾ ಕಿನ್ನರ ಅಖಾಡಕ್ಕೆ ಸೇರುವ ಮೂಲಕ ಮಹಾಮಂಡಲೇಶ್ವರಿಯಾಗಿದ್ದರು. ಮಮತಾ ಕುಲಕರ್ಣಿ ಹೆಸರನ್ನು ಬದಲಿಸಿಕೊಂಡು `ಮಾಯಿ ಮಮತಾ ನಂದಗಿರಿ’ ಎಂದು ನಾಮಕರಣ ಮಾಡಿಕೊಂಡಿದ್ದರು. ದೇಶದ್ರೋಹದ ಆರೋಪ ಹೊತ್ತಿರುವ ಮಮತಾ ಕುಲಕರ್ಣಿಯನ್ನು ಅಖಾಡಕ್ಕೆ ಸೇರಿಸಿದ್ದು ಮಾತ್ರವಲ್ಲದೇ ತನ್ನ ಅರಿವಿಲ್ಲದೆ ಅವರನ್ನು ಮಹಾಮಂಡಲೇಶ್ವರ ಎಂದು ನೇಮಿಸಿದ್ದಕ್ಕಾಗಿ ಮಹಾಮಂಡಲೇಶ್ವರ ಲಕ್ಷ್ಮಿನಾರಾಯಣ ತ್ರಿಪಾಠಿ ಅವರನ್ನೂ ಸಹ ಕಿನ್ನರ ಅಖಾಡದಿಂದ ಹೊರ ಹಾಕಿದ್ದಾರೆ.
ಕಳೆದ 2 ವರ್ಷಗಳಿಂದ ಜೂನಾ ಅಖಾಡದೊಂದಿಗೆ ಸಂಪರ್ಕದಲ್ಲಿದ್ದ ಮಮತಾ, 2-3 ತಿಂಗಳಿಂದ ಕಿನ್ನರ ಅಖಾಡದೊಂದಿಗೆ ನಿಕಟ ಸಂಪರ್ಕ ಬೆಳೆಸಿಕೊಂಡಿದ್ದರು. ಇದೀಗ ಅದೇ ಅಖಾಡದ ಭಾಗವಾಗಲು ನಿರ್ಧರಿಸಿ ಲೌಕಿಕ ಜಗತ್ತನ್ನು ತೊರೆದು ಆಧ್ಯಾತ್ಮಿಕ ಜಗತ್ತಿಗೆ ಇಳಿದಿದ್ದರು. ಮಮತಾ ಕುಲಕರ್ಣಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದರು. ಬಳಿಕ ತಮ್ಮ ಸ್ವಂತ ಪಿಂಡ ಪ್ರದಾನಮಾಡುವ ಮೂಲಕ ಕಿನ್ನರ ಅಖಾಡಕ್ಕೆ ಸೇರ್ಪಡೆಯಾಗಿ ಮಹಾಮಂಡಲೇಶ್ವರರಾಗಿದ್ದರು. ಇವರಿಗೆ ಕಿನ್ನರ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಲಕ್ಷ್ಮಿ ನಾರಾಯಣ ತ್ರಿಪಾಠಿ ದೀಕ್ಷೆ ನೀಡಿದ್ದರು.
ಅಂದಹಾಗೆ ನಟಿ ಮಮತಾ ಕುಲಕರ್ಣಿ ಕನ್ನಡದ ವಿಷ್ಣು ವಿಜಯ ಸಿನಿಮಾದಲ್ಲಿ ನಟಿಸಿದ್ದರು. ಇದಲ್ಲದೆ ವಕ್ತ ಹಮಾರಾ ಹೈ, ಕ್ರಾಂತಿವೀರ, ಸಬ್ಸೆ ಬಡಾ ಕಿಲಾಡಿ ಇನ್ನಿತರ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.
Advertisement