
ಪ್ರಯಾಗ್ ರಾಜ್: ಮಹಾಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆ (ಜ.29) ರಂದು ಸಂಭವಿಸಿದ್ದ ಕಾಲ್ತುಳಿತ ಘಟನೆ ಬಗ್ಗೆ ಜ್ಯೋತಿಷ್ ಪೀಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಮಾತನಾಡಿರುವುದು ಈಗ ವ್ಯಾಪಕ ಸುದ್ದಿಯಾಗುತ್ತಿದೆ.
ಕಾಲ್ತುಳಿತದಲ್ಲಿ ಉಂಟಾದ ಸಾವು-ನೋವುಗಳ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ನಿಖರ ಮಾಹಿತಿಯನ್ನು ಹಲವು ಗಂಟೆಗಳ ಕಾಲ ಮುಚ್ಚಿಟ್ಟಿದ್ದರು ಎಂದು ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಆರೋಪಿಸಿದ್ದಾರೆ.
ಘಟನೆಯ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಸುಳ್ಳು ಹೇಳಿದ್ದಾರೆ. ನಾವು ಜ.29 ರಂದು ಬೆಳಿಗ್ಗೆ ಎದ್ದ ಕೂಡಲೇ ಕಾಲ್ತುಳಿತ ಉಂಟಾಗಿ 17 ಮಂದಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಬಂದಿತ್ತು. ನಾವು ತೆರಳಬೇಕಿದ್ದ ಅಮೃತ ಸ್ನಾನವನ್ನೂ ರದ್ದುಗೊಳಿಸಲಾಗಿತ್ತು. ಬೆಳಿಗ್ಗೆ 10:30 ರ ವೇಳೆಗೆ ಸಿಎಂ ಈ ಘಟನೆ ಬಗ್ಗೆ ಮಾತನಾಡಿ ಹಲವು ಭಕ್ತಾದಿಗಳಿಗೆ ಗಾಯಗಳಾಗಿವೆ, ಇತರ ಭಕ್ತಾದಿಗಳು ವದಂತಿಗಳಿಗೆ ಕಿವಿಗೊಡಬಾರದು ಎಂದು ಹೇಳಿದ್ದರು. ಆದರೆ ಎಲ್ಲಿಯೂ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಮಾತನಾಡಲಿಲ್ಲ. "ಹಾಗಾಗಿ ನಾನು ಇತರ ಶಂಕರಾಚಾರ್ಯರೊಂದಿಗೆ ಪವಿತ್ರ ಸ್ನಾನಕ್ಕೆ ಹೋದೆ. ನಂತರ, ಅವರು ಅಖಾಡಗಳ ಸದಸ್ಯರಿಗೆ ಕರೆ ಮಾಡಿ, ಎಲ್ಲವೂ ಚೆನ್ನಾಗಿದೆ ಎಂದು ಹೇಳಿದರು. ಅಖಾಡಗಳು ತಮ್ಮ ಸ್ನಾನವನ್ನು ರದ್ದುಗೊಳಿಸಿದ್ದರು ಆದರೆ ಮುಖ್ಯಮಂತ್ರಿಗಳಿಂದ ಸಕಾರಾತ್ಮಕ ಸಂದೇಶ ಬಂದ ನಂತರ ಅಖಾಡದ ಸನ್ಯಾಸಿಗಳು ಅಮೃತ ಸ್ನಾನಕ್ಕೆ ಮುಂದಾದರು. ಸಾವು ಇಲ್ಲ ಎಂದು ಹೇಳಿದಾಗ ಅದು ನಮಗೆ ಸಿಎಂ ನೀಡಿದ ತಪ್ಪು ಮಾಹಿತಿಯಲ್ಲವೇ? ಎಂದು ಅವಿಮುಕ್ತೇಶ್ವರಾನಂದ ಸರಸ್ವತಿ ಪ್ರಶ್ನಿಸಿದ್ದಾರೆ.
ಹಿಂದೂ ಸಂಪ್ರದಾಯದಲ್ಲಿ, ಅಂತಹ ಸಾವು-ನೋವುಗಳ ಘಟನೆಗಳಾದಾಗ ಕುಟುಂಬ ಸದಸ್ಯರು ಉಪವಾಸ ಮಾಡುತ್ತಾರೆ. ನಾವು ಕಾಲ್ತುಳಿತದಲ್ಲಿ ಕಳೆದುಕೊಂಡವರಿಗಾಗಿ ಒಂದು ದಿನದ ಉಪವಾಸ ಆಚರಿಸಲು ಸಾಧ್ಯವಾಗುತ್ತಿರಲಿಲ್ಲವೇ?" ನೀವು (ಆದಿತ್ಯನಾಥ್) ಅದರಿಂದ ನಮ್ಮನ್ನು ವಂಚಿತಗೊಳಿಸಿದ್ದೀರಿ. ನೀವು ನಮ್ಮನ್ನು ಎಲ್ಲವೂ ವದಂತಿ ಎಂದು ನಂಬಿಸಿದ್ದೀರಿ. ಸಂತರು ಮತ್ತು ಸನಾತನಿಯರಿಗೆ ಇಷ್ಟೊಂದು ಗಂಭೀರ ದ್ರೋಹವೇ?” ಎಂದು ಅವರು ಅವಿಮುಕ್ತೇಶ್ವರಾನಂದ ಸರಸ್ವತಿ ಪ್ರಶ್ನಿಸಿದ್ದಾರೆ.
ದೇಶದ ಜನತೆಯ ಎದುರು ಯೋಗಿ ಆದಿತ್ಯನಾಥ್ ಸುಳ್ಳು ಹೇಳಿದ್ದಾರೆ. ಸಂಜೆ ವೇಳೆಗೆ ಸಿಎಂ ಸಾವಿನ ಸಂಖ್ಯೆ ಬಗ್ಗೆ ಒಪ್ಪಿಕೊಂಡರು ಅದಕ್ಕಿಂತ ಮುಂಚೆ ಅವರಿಗೆ ಕಾಲ್ತುಳಿತದಿಂದ ಸಾವು ಸಂಭವಿಸಿರುವುದು ಗೊತ್ತಿರಲಿಲ್ಲವೇ? ಸಿಎಂ ಯೋಗಿ ಆದಿತ್ಯನಾಥ್ ಸುಳ್ಳುಗಾರ, ಸಿಎಂ ಪದವಿಯಲ್ಲಿರಲು ಅವರು ಯೋಗ್ಯರಲ್ಲ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದ್ದಾರೆ.
ಈ ಘಟನೆ ಸರ್ಕಾರದಿಂದ ದೊಡ್ಡ ಹೇಳಿಕೆಗಳ ನಡುವೆ ನಡೆದಿದೆ. ಆದಿತ್ಯನಾಥ್ 40 ಕೋಟಿ ಭಕ್ತರು ಆಗಮಿಸುತ್ತಿದ್ದಾರೆ ಎಂದು ಹೇಳಿದ್ದರು. ಹಾಗಾದರೆ ಇಷ್ಟೊಂದು ಜನರಿಗೆ ಸೂಕ್ತ ವ್ಯವಸ್ಥೆ ಏಕೆ ಇರಲಿಲ್ಲ? ಎಂದು ಪ್ರಶ್ನಿಸಿದ್ದಾರೆ.
Advertisement