
ನವದೆಹಲಿ: ವಿದೇಶಿ ಹಸ್ತಕ್ಷೇಪವಿಲ್ಲದ ಮೊದಲ ಸಂಸತ್ ಅಧಿವೇಶನ ಇದಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಹೇಳಿದ್ದು, ಈ ಮೂಲಕ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದಿನಿಂದ ಸಂಸತ್ತಿನ ಬಜೆಟ್ ಅಧಿವೇಶನ ಶುರುವಾಗಲಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಅಧಿವೇಶನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದರು.
ಯಾವುದೇ ಶುಭ ಫಲಕ್ಕಾಗಿ ನಾವು ಮಹಾಲಕ್ಷ್ಮಿಯನ್ನು ಪ್ರಾರ್ಥಿಸುವುದು ಸಾಮಾನ್ಯ. ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನ ಸಂಪತ್ತು ಮತ್ತು ಸಮೃದ್ಧಿಯ ದೇವತೆ ಲಕ್ಷ್ಮಿ ದೇವಿಗೆ ನಮಸ್ಕರಿಸುತ್ತೇನೆ. ಲಕ್ಷ್ಮಿ ದೇವಿ ನಮ್ಮ ದೇಶದ ಬಡ ಮತ್ತು ಮಧ್ಯಮ ವರ್ಗದವರನ್ನು ಆಶೀರ್ವದಿಸಲಿ ಎಂದು ಹೇಳಿದರು.
ಇದು ಮೂರನೇ ಅವಧಿಯ ಮೊದಲ ಪೂರ್ಣ ಬಜೆಟ್ ಆಗಿದೆ. 2047 ರಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಈಡೇರಿಸುತ್ತದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತ 75 ವರ್ಷಗಳನ್ನು ಪೂರ್ಣಗೊಳಿಸಿದೆ ಎಂಬುದು ಬಹಳ ಹೆಮ್ಮೆಯ ವಿಷಯವಾಗಿದೆ. ಭಾರತವು ಜಾಗತಿಕ ವ್ಯವಸ್ಥೆಯಲ್ಲೂ ತನ್ನನ್ನು ತಾನು ಉತ್ತಮವಾಗಿ ಸ್ಥಾಪಿಸಿಕೊಂಡಿದೆ. ಇದು ನನ್ನ ಮೂರನೇ ಅವಧಿಯ ಮೊದಲ ಸಂಪೂರ್ಣ ಬಜೆಟ್. 2047 ರಲ್ಲಿ, ಭಾರತವು 100 ವರ್ಷಗಳ ಸ್ವಾತಂತ್ರ್ಯ ದಿನಾಚರಣೆ ಪೂರ್ಣಗೊಳಿಸಿದಾಗ, ಅದು ವಿಕಸಿತ ಭಾರತವಾಗಿ ದಾಖಲಾಗಬೇಕು. ಆ ಗುರಿಯನ್ನು ಸಾಧಿಸಬೇಕು. ಈ ಹಿನ್ನೆಲೆಯಲ್ಲಿ ಈ ಬಜೆಟ್ ರಾಷ್ಟ್ರಕ್ಕೆ ಹೊಸ ಶಕ್ತಿ ಮತ್ತು ಭರವಸೆಯನ್ನು ನೀಡುತ್ತದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. 2047 ರ ಹೊತ್ತಿಗೆ ದೇಶವನ್ನು ಅಭಿವೃದ್ಧಿಪಡಿಸಲಾಗುವುದು.
ನಾವು ಮಿಷನ್ ಮೋಡ್‌ನಲ್ಲಿ ಮುನ್ನಡೆಯುತ್ತಿದ್ದೇವೆ. ನಾವೀನ್ಯತೆ, ಸೇರ್ಪಡೆ ಮತ್ತು ಹೂಡಿಕೆ ಯಾವಾಗಲೂ ನಮ್ಮ ಆರ್ಥಿಕ ಕಾರ್ಯತಂತ್ರದ ಅಡಿಪಾಯವಾಗಿದೆ. ಈ ಅಧಿವೇಶನದಲ್ಲಿ ಹಿಂದಿನಂತೆ ಅನೇಕ ಮಹತ್ವದ ಮಸೂದೆಗಳನ್ನು ಮಂಡಿಸಿ ಚರ್ಚಿಸಲಾಗುವುದು. ಸಂಪೂರ್ಣ ಚರ್ಚೆಯ ನಂತರ, ದೇಶವನ್ನು ಬಲಪಡಿಸುವುದಕ್ಕಾಗಿ ಈ ಮಸೂದೆಗಳನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.
ಇದೇ ವೇಳೆ ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದ ಮೋದಿಯವರು, 2014 ರಿಂದ ಇದೇ ಮೊದಲ ಬಾರಿಗೆ ವಿದೇಶಿ ಹಸ್ತಕ್ಷೇಪವಿಲ್ಲದ ಸಂಸತ್ ಅಧಿವೇಶ ನಡೆಯುತ್ತಿದೆ. ಯಾವುದೇ ವಿದೇಶಿ ಶಕ್ತಿಗಳು ಅಶಾಂತಿಯನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿಲ್ಲ. ಪ್ರತಿ ಬಜೆಟ್ ಅಧಿವೇಶನದಲ್ಲೂ ಇಂತಹ ಹಸ್ತಕ್ಷೇಪವನ್ನು ಗಮನಿಸುತ್ತಿದ್ದೆ. ಯಾವಾಗಲೂ ಅಶಾಂತಿ ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿದ್ದವು. ದುರದೃಷ್ಟವಶಾತ್ ನಮ್ಮಲ್ಲಿನ ನಾಯಕರೂ ಕೂಡ ಅದಕ್ಕೆ ಕುಮ್ಮಕ್ಕು ನೀಡುತ್ತಿದ್ದರು ಎಂದು ಟೀಕಿಸಿದರು.
Advertisement