
ಕೋಲ್ಕತ್ತಾ: ಕಾನೂನು ಕಾಲೇಜಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ವಿವಾದಾತ್ಮಕ ಹೇಳಿಕೆ ನೀಡಿದ್ದ ಟಿಎಂಸಿ ಹಿರಿಯ ನಾಯಕ ಮದನ್ ಮಿತ್ರಾ ಪಕ್ಷದ ನಾಯಕತ್ವಕ್ಕೆ ಬೇಷರತ್ತಾಗಿ ಕ್ಷಮೆಯಾಚಿಸಿದ್ದಾರೆ.
ಟಿಎಂಸಿಯ ಶೋಕಾಸ್ ನೋಟಿಸ್‌ಗೆ ಸೋಮವಾರ ತಡರಾತ್ರಿ ಶಾಸಕರು ಉತ್ತರ ನೀಡಿದ್ದಾರೆ.
ಮಿತ್ರಾ ಅವರು ತಮ್ಮ ಹೇಳಿಕೆಗಳನ್ನು ಯಾವ ಸಂದರ್ಭದಲ್ಲಿ ನೀಡಿದರು ಎಂಬುದರ ವಿವರಣೆಯನ್ನು ಸಹ ನೀಡಿದ್ದಾರೆ. ಅವರ ಪ್ರತಿಕ್ರಿಯೆ ಸಂಕ್ಷಿಪ್ತವಾಗಿದ್ದು, ಎರಡು ಭಾಗಗಳಲ್ಲಿ ಇತ್ತು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮೊದಲ ಭಾಗವು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾದ ಅವರ ಹೇಳಿಕೆಗೆ ಔಪಚಾರಿಕ ಮತ್ತು ಬೇಷರತ್ತಾದ ಕ್ಷಮೆಯಾಚನೆಯನ್ನು ಒಳಗೊಂಡಿದೆ. ಎರಡನೇ ಭಾಗವು ಅವರು ಯಾವ ಸಂದರ್ಭದಲ್ಲಿ ಹೇಳಿಕೆ ನೀಡಿದರು ಮತ್ತು ಅದರ ಹಿಂದಿರುವ ಉದ್ದೇಶವನ್ನು ತಿಳಿಸಿದ್ದಾರೆ.
ಟಿಎಂಸಿ ಸದ್ಯ ಅವರ ಪ್ರತಿಕ್ರಿಯೆಯನ್ನು ಪರಿಶೀಲಿಸುತ್ತಿದ್ದು, ನಂತರ ಮುಂದಿನ ಕ್ರಮವನ್ನು ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಕಸ್ಬಾದ ದಕ್ಷಿಣ ಕಲ್ಕತ್ತಾ ಕಾನೂನು ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಜೂನ್ 25 ರಂದು ಕಾಲೇಜು ಆವರಣದೊಳಗೆ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿದ ನಂತರ ವಿವಾದ ಭುಗಿಲೆದ್ದಿತು.
ನಂತರ ಮಿತ್ರಾ ಅವರು, ಯುವತಿ ಕಾಲೇಜು ಕ್ಯಾಂಪಸ್‌ಗೆ ಒಂಟಿಯಾಗಿ ಹೋಗದಿದ್ದರೆ, ಈ ಘಟನೆಯನ್ನು ತಪ್ಪಿಸಬಹುದಿತ್ತು ಎಂದಿದ್ದರು. ಅವರ ಹೇಳಿಕೆಯನ್ನು ವ್ಯಾಪಕವಾಗಿ ಖಂಡಿಸಲಾಯಿತು.
'ಆ ಹುಡುಗಿ ಅಲ್ಲಿಗೆ ಒಬ್ಬಂಟಿಯಾಗಿ ಹೋಗದಿದ್ದರೆ, ಇದು ಸಂಭವಿಸುತ್ತಿರಲಿಲ್ಲ. ಅವಳು ಸ್ನೇಹಿತರನ್ನು ಜೊತೆಗೆ ಕರೆದುಕೊಂಡು ಹೋಗಬೇಕಿತ್ತು. ಅವಳ ಪೋಷಕರಿಗೆ ಅಥವಾ ಯಾರಿಗಾದರೂ ತಿಳಿಸಬೇಕಿತ್ತು. ಆರೋಪಿಗಳು ಈ ಪರಿಸ್ಥಿತಿಯ ಲಾಭ ಪಡೆದರು ಎಂದು ಮಿತ್ರಾ ಹೇಳಿದ್ದರು.
ಕಾಲೇಜು ಮುಚ್ಚಿರುವುದು ಯುವತಿಗೆ ತಿಳಿದಿತ್ತು ಮತ್ತು ಬಾಲಕಿಯರ ಸಾಮಾನ್ಯ ಕೊಠಡಿ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ನಿರೀಕ್ಷೆಯಿಂದ ಅವರು ಅಲ್ಲಿಗೆ ಹೋಗಿದ್ದರು ಎಂದು ಆರೋಪಿಸಿದ್ದರು.
ಈ ಹೇಳಿಕೆಗಳು ರಾಜಕೀಯ ವಲಯದಾದ್ಯಂತ ಸಾರ್ವಜನಿಕ ಆಕ್ರೋಶ ಮತ್ತು ಟೀಕೆಗೆ ಕಾರಣವಾಯಿತು.
ಟಿಎಂಸಿ ಮಿತ್ರಾ ಅವರ ಹೇಳಿಕೆಗಳಿಂದ ದೂರವಿದ್ದು, ಅದು ಅವರ 'ವೈಯಕ್ತಿಕ ಅಭಿಪ್ರಾಯ'. ಆದರೆ, ಪಕ್ಷವು ಅಂತಹ ಅಭಿಪ್ರಾಯಗಳನ್ನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಪಕ್ಷದ ಸಾರ್ವಜನಿಕ ಇಮೇಜ್‌ಗೆ ತೀವ್ರ ಹಾನಿ ಉಂಟುಮಾಡುವ ಮತ್ತು ಈ ವಿಷಯದ ಬಗ್ಗೆ ಅದರ ಅಧಿಕೃತ ನಿಲುವಿಗೆ ವಿರುದ್ಧವಾದ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಟಿಎಂಸಿ ರಾಜ್ಯಾಧ್ಯಕ್ಷ ಸುಬ್ರತಾ ಬಕ್ಷಿ ಭಾನುವಾರ ಮಿತ್ರಾ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದರು.
Advertisement