
ಕೋಲ್ಕತ್ತಾ: RG ಕರ್ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ಅತ್ಯಾಚಾರ ಕೊಲೆ ಪ್ರಕರಣದ ಬೆನ್ನಲ್ಲೇ ನಡೆದ ಕಾನೂನು ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರ (Madan Mitra) ಪ್ರಕರಣ ಸಂಬಂಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದಕ್ಷಿಣ ಕಲ್ಕತ್ತಾ ಕಾನೂನು ಕಾಲೇಜಿನಲ್ಲಿ ಬುಧವಾರ ತಡರಾತ್ರಿ ಭದ್ರತಾ ಕೊಠಡಿಯಲ್ಲಿ 24 ವರ್ಷದ ಕೋಲ್ಕತ್ತಾ ಕಾಲೇಜು ವಿದ್ಯಾರ್ಥಿನಿಯ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಮಾಡಿದ್ದರು.
24 ವರ್ಷದ ಕಾನೂನು ವಿದ್ಯಾರ್ಥಿನಿಯನ್ನುಕೋಲ್ಕತ್ತಾದ ಕಸ್ಬಾ ಪ್ರದೇಶದ ದಕ್ಷಿಣ ಕೋಲ್ಕತ್ತಾ ಕಾನೂನು ಕಾಲೇಜಿನಲ್ಲಿ 31 ವರ್ಷದ ಮಾಜಿ ವಿದ್ಯಾರ್ಥಿ, ಈಗ ವಕೀಲರಾಗಿರುವ ಮೋನೋಜಿತ್ ಮಿಶ್ರಾ ಸೇರಿ ಮೂವರು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣದಲ್ಲಿ 19 ವರ್ಷದ ಜೈಬ್ ಅಹ್ಮದ್ ಮತ್ತು 20 ವರ್ಷದ ಪ್ರಮಿತ್ ಮುಖೋಪಾಧ್ಯಾಯ ಕೂಡ ಆರೋಪಿಗಳು ಎಂದು ಗುರುತಿಸಲಾಗಿದೆ. ಈ ಪ್ರಕರಣ ಸಂಬಂಧ ಪೊಲೀಸರು ಭದ್ರತಾ ಸಿಬ್ಬಂದಿ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.
ಇನ್ನು ಈ ಪ್ರಕರಣದಲ್ಲಿ ಭದ್ರತಾ ಲೋಪದ ವಿಚಾರವಾಗಿ ಸರ್ಕಾರದ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದಿವೆ. ವಿದ್ಯಾರ್ಥಿ ಸಂಘಟನೆಗಳು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಈ ನಡುವೆಯೇ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ಶಾಸಕ ನೀಡಿರುವ ಹೇಳಿಕೆ ಇದೀಗ ವಿವಾದಕ್ಕೀಡಾಗಿದೆ.
'ಅವಳ್ಯಾಕೆ ಅಲ್ಲಿಗೆ ಹೋಗಿದ್ಲು..'ಜನರು ಪರಿಸ್ಥಿತಿ ಲಾಭ ಪಡೆದ್ರು'
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಹೇಳಿಕೆ ನೀಡಿದ್ದು ಈ ಹೇಳಿಕೆ ಇದೀಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಈ ದುರಂತದಿಂದ ನುಣುಚಿಕೊಳ್ಳುವ ಪ್ರಯತ್ನದಲ್ಲಿ ಮದನ್ ಮಿತ್ರಾ ಮಹಿಳೆಯರ ವಿರುದ್ಧ ಕ್ಷುಲ್ಲಕ ಹೇಳಿಕೆ ನೀಡಿದ್ದಾರೆ.
'ಸಂತ್ರಸ್ಥ ಮಹಿಳೆ ಘಟನಾ ಸ್ಥಳಕ್ಕೆ ಏಕೆ ಹೋಗಿದ್ದಳು. ಆಕೆ ಏಕಾಂಗಿ ಹೋಗಿದ್ದಕ್ಕೇ ಆಕೆ ಮೇಲೆ ಅತ್ಯಾಚಾರವಾಯಿತು. ಅಪರಾಧ ಮಾಡಿದ ಜನರು ಪರಿಸ್ಥಿತಿ ಲಾಭ ಪಡೆದರು. ಆಕೆ ಅಪರಾಧದ ಸ್ಥಳಕ್ಕೆ ಹೋಗದಿದ್ದರೆ ಘಟನೆ ಎಂದಿಗೂ ಸಂಭವಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಅಂತೆಯೇ ಅವಳು ಎಲ್ಲಿಗೆ ಹೋಗುತ್ತಿದ್ದೇನೆಂದು ಯಾರಿಗಾದರೂ ಹೇಳಿದ್ದರೆ, ತನ್ನೊಂದಿಗೆ ಒಂದೆರಡು ಸ್ನೇಹಿತರನ್ನು ಕರೆದುಕೊಂಡು ಹೋಗಿದ್ದರೆ, ಅದು ಸಂಭವಿಸುತ್ತಿರಲಿಲ್ಲ. ಅಪರಾಧ ಎಸಗಿದ ಜನರು ಪರಿಸ್ಥಿತಿಯ ಲಾಭ ಪಡೆದರು ಎಂದು ಹೇಳಿದರು. ಆದಾಗ್ಯೂ ತಪ್ಪಿತಸ್ಥ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ವಾದಿಸಿದ್ದಾರೆ.
ಸ್ವಪಕ್ಷೀಯರಿಂದಲೇ ವಿರೋಧ
ಇನ್ನು ಮದನ್ ಮಿತ್ರಾ ಹೇಳಿಕೆ ಪಶ್ಚಿಮ ಬಂಗಾಳ ರಾಜಕೀಯ ವಲಯದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದು ಸ್ವತಃ ತೃಣಮೂಲ ಕಾಂಗ್ರೆಸ್ ನಾಯಕರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ಈ ಕುರಿತು ಮಾತನಾಡಿರುವ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ,
"ಒಬ್ಬ ಸ್ನೇಹಿತ ತನ್ನ ಸ್ನೇಹಿತೆಯ ಮೇಲೆ ಅತ್ಯಾಚಾರ ಮಾಡಿದರೆ ಏನು ಮಾಡಬಹುದು? ಪೊಲೀಸರು ಶಾಲೆಗಳಲ್ಲಿ ಇರುತ್ತಾರೆಯೇ? ಇದನ್ನು ವಿದ್ಯಾರ್ಥಿಗಳು ಇನ್ನೊಬ್ಬ ವಿದ್ಯಾರ್ಥಿನಿಗೆ ಮಾಡಿದ್ದಾರೆ. ಅವಳನ್ನು ಯಾರು ರಕ್ಷಿಸುತ್ತಾರೆ? ಈ ಎಲ್ಲಾ ಅಪರಾಧ ಮತ್ತು ಕಿರುಕುಳವನ್ನು ಯಾರು ಮಾಡುತ್ತಾರೆ? ಕೆಲವು ಪುರುಷರು ಇದನ್ನು ಮಾಡುತ್ತಾರೆ. ಹಾಗಾದರೆ, ಮಹಿಳೆಯರು ಯಾರ ವಿರುದ್ಧ ಹೋರಾಡಬೇಕು? ಮಹಿಳೆಯರು ಈ ವಿಕೃತ ಪುರುಷರ ವಿರುದ್ಧ ಹೋರಾಡಬೇಕು" ಎಂದು ಅವರು ಹೇಳಿದರು.
"ನಾನು ಅದನ್ನೇ ಮತ್ತೆ ಮತ್ತೆ ಹೇಳುತ್ತಿದ್ದೇನೆ. ಯಾರು ಅದನ್ನು ಮಾಡಿದ್ದಾರೆಯೋ ಅವರನ್ನು ತಕ್ಷಣ ಬಂಧಿಸಬೇಕು. ಆದರೆ ಒಬ್ಬ ಸ್ನೇಹಿತ ಸ್ನೇಹಿತನ ಮೇಲೆ ಅತ್ಯಾಚಾರ ಮಾಡಿದರೆ, ಅದು ಭ್ರಷ್ಟಾಚಾರ ಹೇಗೆ? ಸುರಕ್ಷತೆ ಮತ್ತು ಭದ್ರತೆಯ ಸ್ಥಿತಿ ಎಲ್ಲೆಡೆ ಒಂದೇ ಆಗಿರುತ್ತದೆ. ಪುರುಷರ ಮನಸ್ಥಿತಿ ಹೀಗೆಯೇ ಇರುವವರೆಗೆ, ಈ ಘಟನೆಗಳು ನಡೆಯುತ್ತಲೇ ಇರುತ್ತವೆ" ಎಂದು ಅವರು ಕಲ್ಯಾಣ್ ಬ್ಯಾನರ್ಜಿ ಹೇಳಿದರು.
Advertisement