
ನವದೆಹಲಿ: ಅತಿವೇಗ ಮತ್ತು ಅಜಾಗರೂಕ ವಾಹನ ಚಾಲನೆಯಿಂದ ಸಾವಿಗೀಡಾದ ವ್ಯಕ್ತಿಯ ಕುಟುಂಬಗಳಿಗೆ ಯಾವುದೇ ವಿಮಾ ಕಂಪನಿಗಳು ಪರಿಹಾರವನ್ನು ಪಾವತಿಸಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅತಿವೇಗದಲ್ಲಿ ಕಾರು ಚಾಲನೆ ಮಾಡಿ ಸಾವಿಗೀಡಾದ ವ್ಯಕ್ತಿಯ ಪತ್ನಿ, ಮಗ ಮತ್ತು ಪೋಷಕರು ಕೋರಿದ 80 ಲಕ್ಷ ಪರಿಹಾರವನ್ನು ನೀಡಲು ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠವು ನಿರಾಕರಿಸಿದೆ.
ಕಳೆದ ವರ್ಷ ನವೆಂಬರ್ 23 ರಂದು ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಮೃತ ವ್ಯಕ್ತಿಯ ಕುಟುಂಬಸ್ಥರು ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.
'ನಾವು ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ಒಲವು ತೋರುತ್ತಿಲ್ಲ. ಆದ್ದರಿಂದ, ವಿಶೇಷ ರಜೆ ಅರ್ಜಿಯನ್ನು ವಜಾಗೊಳಿಸಲಾಗಿದೆ' ಎಂದು ಬುಧವಾರ ಹೊರಡಿಸಿದ ಆದೇಶದಲ್ಲಿ ಪೀಠ ತಿಳಿಸಿದೆ.
2014ರ ಜೂನ್ 18 ರಂದು, ಎನ್ಎಸ್ ರವೀಶ ಎಂಬುವವರು ಮಲ್ಲಸಂದ್ರ ಗ್ರಾಮದಿಂದ ಅರಸೀಕೆರೆ ಪಟ್ಟಣಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಅವರ ತಂದೆ, ಸಹೋದರಿ ಮತ್ತು ಅವರ ಮಕ್ಕಳು ಕೂಡ ಅದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.
ರವೀಶ ಸಂಚಾರ ನಿಯಮಗಳನ್ನು ಪಾಲಿಸದೆ ನಿರ್ಲಕ್ಷ್ಯದಿಂದ ಕಾರನ್ನು ಚಲಾಯಿಸಿದ್ದಾರೆ ಮತ್ತು ನಿಯಂತ್ರಣ ಕಳೆದುಕೊಂಡ ವಾಹನ ರಸ್ತೆಯಲ್ಲಿ ಪಲ್ಟಿ ಹೊಡೆದಿತ್ತು. ಅಪಘಾತದಲ್ಲಿ ರವೀಶ್ ಮೃತಪಟ್ಟಿದ್ದರು ಎಂದು ನ್ಯಾಯಾಲಯ ಗಮನಿಸಿದೆ.
ಮೃತ ವ್ಯಕ್ತಿಯ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಸಂಭವಿಸಿರುವುದರಿಂದ ಮತ್ತು ಅವರು ಸ್ವಯಂ ದೌರ್ಜನ್ಯ ಎಸಗಿರುವುದರಿಂದ, ಕಾನೂನುಬದ್ಧ ವಾರಸುದಾರರು ಅವರ ಸಾವಿಗೆ ಯಾವುದೇ ಪರಿಹಾರವನ್ನು ಪಡೆಯಲು ಸಾಧ್ಯವಿಲ್ಲ. ಏಕೆಂದರೆ, ಅದು ನಿಯಮಗಳನ್ನು ಉಲ್ಲಂಘನೆ ಮಾಡಿದ ವ್ಯಕ್ತಿಯು ತನ್ನಿಂದಲೇ ಆದ ತಪ್ಪುಗಳಿಗೆ ಪರಿಹಾರವನ್ನು ಪಡೆದಂತೆ ಆಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
Advertisement