ಜಮ್ಮು: 6,400 ಯಾತ್ರಿಕರು ಅಮರನಾಥ ಯಾತ್ರೆ ಆರಂಭ!
ಜಮ್ಮು: ವಾರ್ಷಿಕ ಅಮರನಾಥ ಯಾತ್ರೆ ಹಿನ್ನೆಲೆಯಲ್ಲಿ 6,400 ಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನೊಳಗೊಂಡ ಮೂರನೇ ಬ್ಯಾಚ್ ಶುಕ್ರವಾರ ಎರಡು ಪ್ರತ್ಯೇಕ ಬೆಂಗಾವಲುಗಳಲ್ಲಿ ಜಮ್ಮುವಿನ ಭಗವತಿ ನಗರ ಬೇಸ್ ಕ್ಯಾಂಪ್ ನಿಂದ ಹೊರಟಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
38 ದಿನಗಳ ವಾರ್ಷಿಕ ಯಾತ್ರೆಯು ಗುರುವಾರ ಆರಂಭವಾದಾಗಿನಿಂದ ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್ ಮತ್ತು ಗಂಡರ್‌ಬಾಲ್ ಜಿಲ್ಲೆಯ ಬಾಲ್ಟಾಲ್‌ನಿಂದ ಎರಡು ಸಾಂಪ್ರದಾಯಿಕ ಮಾರ್ಗಗಳಲ್ಲಿ ತೆರಳಿದ ಸುಮಾರು 14,000 ಯಾತ್ರಿಕರು, 3,880 ಮೀಟರ್ ಎತ್ತರದ ಗುಹಾ ದೇಗುಲದಲ್ಲಿ ದೇವರ ದರ್ಶನ ಮಾಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
4,723 ಪುರುಷರು, 1,071 ಮಹಿಳೆಯರು, 37 ಮಕ್ಕಳು ಮತ್ತು 580 ಸಾಧುಗಳು ಸೇರಿದಂತೆ 6,411 ಯಾತ್ರಿಕರನ್ನೊಳಗೊಂಡ ಮೂರನೇ ಬ್ಯಾಚ್ 291 ವಾಹನಗಳಲ್ಲಿ ಹೊರಟಿದ್ದಾರೆ. ಈ ತಂಡವು ಭಗವತಿ ನಗರ ಯಾತ್ರಿ ನಿವಾಸದಿಂದ ಎರಡು ಗುಂಪುಗಳಾಗಿ ಬಲ್ಟಾಲ್ ಮತ್ತು ಪಹಲ್ಗಾಮ್‌ಗೆ ಬೆಳಿಗ್ಗೆ 3.15 ಮತ್ತು 4 ಗಂಟೆಗೆ ಸಿಆರ್ ಪಿಎಫ್ ಬೆಂಗಾವಲು ಪಡೆಯೊಂದಿಗೆ ತೆರಳಿತು.
3,622 ಯಾತ್ರಾರ್ಥಿಗಳು 138 ವಾಹನಗಳಲ್ಲಿ ಪಹಲ್ಗಾಮ್ ಮಾರ್ಗದ ಮೂಲಕ ತೆರಳಿದರೆ, 2,789 ಯಾತ್ರಿಕರು 153 ವಾಹನಗಳಲ್ಲಿ ಕಡಿದಾರ ಬಾಲ್ಟಾಲ್ ಮಾರ್ಗವನ್ನು ಬಳಸಿದ್ದಾರೆ. ಬುಧವಾರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಜಮ್ಮುವಿನಿಂದ ಯಾತ್ರೆಗೆ ಚಾಲನೆ ನೀಡಿದಾಗಿನಿಂದ ಒಟ್ಟು 17,549 ಯಾತ್ರಾರ್ಥಿಗಳು ಜಮ್ಮು ಮೂಲ ಶಿಬಿರದಿಂದ ಕಣಿವೆಗೆ ತೆರಳಿದ್ದಾರೆ.
ಏಪ್ರಿಲ್ 22 ರಂದು ಪಹಲ್ಗಾಮ್ ದಾಳಿಯಲ್ಲಿ 26 ಜನರು ಬಲಿಯಾಗಿದ್ದರು. ಈ ಮಾರಕ ದಾಳಿಯ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯಲ್ಲಿ ಯಾತ್ರೆ ಎಂದಿನಂತೆ ನಡೆಯುತ್ತದೆ. ಭಗವತಿ ನಗರ ಮೂಲ ಶಿಬಿರಕ್ಕೆ ಭಾರಿ ಭದ್ರತೆ ಒದಗಿಸಲಾಗಿದೆ. ಯಾತ್ರೆಗೆ ಇದುವರೆಗೆ 3.5 ಲಕ್ಷಕ್ಕೂ ಹೆಚ್ಚು ಮಂದಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ