
ಹೈದರಾಬಾದ್: ಸಂಗಾರೆಡ್ಡಿ ಜಿಲ್ಲೆಯ ಸಿಗಾಚಿ ಇಂಡಸ್ಟ್ರೀಸ್‌ನ ಔಷಧ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದು, ಮೃತಪಟ್ಟವರ ಸಂಖ್ಯೆ 39ಕ್ಕೆ ಏರಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಪರಿತೋಷ್ ಪಂಕಜ್ ಶುಕ್ರವಾರ ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗಿನ ವೇಳೆಗೆ 22 ಜನರು ಇನ್ನೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.
ಗುರುವಾರ ಅಧಿಕೃತ ಪ್ರಕಟಣೆಯ ಪ್ರಕಾರ, ಅವಘಡದ ಸಮಯದಲ್ಲಿ ಘಟಕದಲ್ಲಿ 143 ಜನರು ಕೆಲಸ ಮಾಡುತ್ತಿದ್ದರು ಮತ್ತು ಅವರಲ್ಲಿ 61 ಜನರು ಸುರಕ್ಷಿತವಾಗಿದ್ದಾರೆ. ಚೇತರಿಸಿಕೊಂಡ ನಂತರ 12 ಕಾರ್ಮಿಕರನ್ನು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಮಾಡಲಾಗಿದೆ. ಆದರೆ, ಒಂಬತ್ತು ಜನರು ಇನ್ನೂ ಕಾಣೆಯಾಗಿದ್ದಾರೆ.
ದುರಂತದಲ್ಲಿ ಸಾವಿಗೀಡಾದ 31 ಕಾರ್ಮಿಕರ ಗುರುತು ಪತ್ತೆಹಚ್ಚುವ ಪ್ರಕ್ರಿಯೆ ಮುಕ್ತಾಯಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸ್ಫೋಟಕ್ಕೆ ಕಾರಣ ಏನೆಂಬುದನ್ನು ತನಿಖೆ ಮಾಡಲು ಮತ್ತು ಘಟನೆಗಳ ಅನುಕ್ರಮವನ್ನು ನಿರ್ಧರಿಸಲು ರಾಜ್ಯದಿಂದ ನೇಮಿಸಲ್ಪಟ್ಟ ತಜ್ಞರ ಸಮಿತಿಯು ಗುರುವಾರ ಸ್ಫೋಟದ ಸ್ಥಳಕ್ಕೆ ಭೇಟಿ ನೀಡಿತು.
Advertisement