
ನವದೆಹಲಿ: ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ವಾಗ್ದಾಳಿ ನಡೆಸಿದ್ದು, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮೋದಿ ತಲೆಬಾಗಲಿದ್ದಾರೆಂದು ಹೇಳಿದ್ದಾರೆ.
ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಯುತ್ತಿರುವ ನಡುವಲ್ಲೇ ರಾಹುಲ್ ಗಾಂಧಿಯವರು ಕೇಂದ್ರ ಸರ್ಕಾರದ ಕುರಿತು ಟೀಕೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿಯವರು, ಪಿಯೂಷ್ ಗೋಯಲ್ ಎಷ್ಟು ಬೇಕಾದರೂ ಎದೆ ಬಡಿದುಕೊಳ್ಳಬಹುದು. ನನ್ನ ಮಾತನ್ನು ಬರೆದಿಟ್ಟುಕೊಳ್ಳಿ, ಮೋದಿ ಟ್ರಂಪ್ ಸುಂಕದ ಗಡುವಿಗೆ ಸೌಮ್ಯವಾಗಿ ತಲೆಬಾಗುತ್ತಾರೆ ಎಂದು ಹೇಳಿದ್ದಾರೆ,
ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೇಂದ್ರ ಸಚಿವ ಗೋಯಲ್ ಅವರು, ಭಾರತವು ಪರಸ್ಪರ ಪ್ರಯೋಜನಕಾರಿ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವ ವ್ಯಾಪಾರ ಒಪ್ಪಂದಕ್ಕೆ ಮಾತ್ರ ಸಹಿ ಹಾಕುತ್ತದೆ ಎಂದು ಪುನರುಚ್ಚರಿಸಿದ್ದರು.
ಭಾರತ ಅಮೆರಿಕದೊಂದಿಗಿನ ಪ್ರಸ್ತಾವಿತ ವ್ಯಾಪಾರ ಒಪ್ಪಂದವನ್ನು ಸಂಪೂರ್ಣವಾಗಿ ಅಂತಿಮಗೊಳಿಸಿದಾಗ ಮತ್ತು ರಾಷ್ಟ್ರದ ಹಿತಾಸಕ್ತಿಯ ದೃಷ್ಟಿಯಿಂದ ಮಾತ್ರ ಒಪ್ಪಿಕೊಳ್ಳಲಾಗುತ್ತದೆ. ರಾಷ್ಟ್ರೀಯ ಹಿತಾಸಕ್ತಿ ಯಾವಾಗಲೂ ಮುಖ್ಯವಾಗಿರಬೇಕು. ಅದನ್ನು ಗಮನದಲ್ಲಿಟ್ಟುಕೊಂಡು ಒಪ್ಪಂದ ಮಾಡಿಕೊಂಡರೆ, ಭಾರತ ಯಾವಾಗಲೂ ಅಭಿವೃದ್ಧಿ ಹೊಂದಿದ ದೇಶಗಳ ಜೊತೆ ವ್ಯವಹರಿಸಲು ಸಿದ್ಧವಾಗಿರುತ್ತದೆ.
ಎರಡೂ ಕಡೆಯವರು ಲಾಭ ಪಡೆದು ಪರಸ್ಪರ ಲಾಭದಾಯಕ ಒಪ್ಪಂದ ಮಾಡಿಕೊಂಡಾಗ ಮಾತ್ರ ಮುಕ್ತ ವ್ಯಾಪಾರ ಒಪ್ಪಂದಗಳು ಸಾಧ್ಯ ಎಂದು ತಿಳಿಸಿದ್ದರು.
ಇದಕ್ಕೂ ಮುನ್ನ ಹೇಳಿಕೆ ನೀಡಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಭಾರತದೊಂದಿಗೆ ನಾವು ಒಂದು ಒಪ್ಪಂದ ಮಾಡಿಕೊಳ್ಳಲಿದ್ದೇವೆ ಎಂದು ನಾನು ಭಾವಿಸುತ್ತೇನೆ. ಇದು ಬೇರೆಯದೇ ರೀತಿಯ ಒಪ್ಪಂದ ಆಗಿರಲಿದೆ. ನಾವು ಹೋಗಿ ಸ್ಪರ್ಧಿಸಲು ಸಾಧ್ಯವಾಗುವಂತಹ ಒಪ್ಪಂದ ಇದಾಗಲಿದೆ. ಸದ್ಯಕ್ಕೆ ಭಾರತ ಯಾರನ್ನೂ ಒಳಗೆ ಬಿಟ್ಟುಕೊಳ್ಳುತ್ತಿಲ್ಲ. ಆದರೆ, ಇನ್ನು ಮುಂದೆ ಭಾರತ ಅದನ್ನು ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ಭಾರತ ಒಪ್ಪಿದರೆ, ನಾವು ಕಡಿಮೆ ತೆರಿಗೆಗಳೊಂದಿಗೆ ಒಂದು ಒಪ್ಪಂದ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದರು.
ಈ ಹಿಂದೆ ಟ್ರಂಪ್, ಭಾರತದ ಉತ್ಪನ್ನಗಳ ಮೇಲೆ ಶೇ.26ರಷ್ಟು ಸುಂಕ ವಿಧಿಸಿದ್ದರು. ಪ್ರಧಾನಿ ಮೋದಿ ಇತ್ತೀಚೆಗೆ ಅಮೆರಿಕಕ್ಕೆ ಬಂದು ಹೋದರು. ಅವರು ನನ್ನ ಉತ್ತಮ ಸ್ನೇಹಿತ, ಮಾತುಕತೆ ವೇಳೆ ನಾನು ಅವರಿಗೆ ನೀವು ನನ್ನ ಸ್ನೇಹಿತ, ಆದರೆ ನೀವು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದೆ. ಭಾರತವು ನಮಗೆ ಶೇ. 52 ರಷ್ಟು ವಿಧಿಸುತ್ತದೆ, ಆದ್ದರಿಂದ ನಾವು ಅವರಿಗೆ ಅದರಲ್ಲಿ ಅರ್ಧದಷ್ಟು ಶೇ.26 ರಷ್ಟು ವಿಧಿಸುತ್ತೇವೆ ಎಂದು ತಿಳಿಸಿದ್ದರು.
Advertisement