
ವಾಷಿಂಗ್ಟನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬಹುಕೋಟಿ ವಂಚನೆ ಮಾಡಿ ದೇಶದಿಂದ ಪರಾರಿಯಾಗಿರುವ ಆರ್ಥಿಕ ಅಪರಾಧಿ ವಜ್ರದ ವ್ಯಾಪಾರಿ ನೀರವ್ ಮೋದಿ ಅವರ ಸಹೋದರ ನೇಹಾಲ್ ಮೋದಿಯನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ. ಸಿಬಿಐ ಮತ್ತು ಇಡಿ ಗಡಿಪಾರು ಕೋರಿಕೆ ಮೇರೆಗೆ ಬಂಧನ ಮಾಡಲಾಗಿದೆ ಎಂದು ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಪಿಟಿಐ ಸುದ್ದಿಸಂಸ್ಥೆ ಶನಿವಾರ ವರದಿ ಮಾಡಿದೆ.
ಜುಲೈ 4 ರಂದು ಬೆಲ್ಜಿಯಂ ಪ್ರಜೆಯಾದ ನೆಹಾಲ್ ಮೋದಿಯನ್ನು ಕಸ್ಟಡಿಗೆ ತೆಗೆದುಕೊಂಡಿರುವುದಾಗಿ ಅಮೆರಿಕದ ನ್ಯಾಯಿಕ ಸಂಸ್ಥೆಗಳು ಭಾರತಕ್ಕೆ ಮಾಹಿತಿ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಜುಲೈ 17 ರಂದು ಈ ವಿಚಾರದ ಮುಂದಿನ ವಿಚಾರಣೆ ನಡೆಯಲಿದ್ದು, ಆಗ ನೆಹಾಲ್ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಆದರೆ ಜಾಮೀನು ಅರ್ಜಿಗೆ ಅಮೆರಿಕ ಪ್ರಾಸಿಕ್ಯೂಟರ್ ಗಳು ವಿರೋಧ ವ್ಯಕ್ತಪಡಿಸುವ ಸಾಧ್ಯತೆಯಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) 2002ರ ಸೆಕ್ಷನ್ 3 (ಅಕ್ರಮ ಹಣ ವರ್ಗಾವಣೆ) ಮತ್ತು ಐಪಿಸಿ ಸೆಕ್ಷನ್ 120 ಬಿ ಕ್ರಿಮಿನಲ್ ಪಿತೂರಿ, ಸೆಕ್ಷನ್ 201 (ಸಾಕ್ಷಿನಾಶ) ಆರೋಪದ ಮೇಲೆ ನೇಹಾಲ್ ಮೋದಿ ಹಸ್ತಾಂತರ ಪ್ರಕ್ರಿಯೆಗಳು ನಡೆಯುತ್ತಿವೆ ಎನ್ನಲಾಗಿದೆ.
13,000 ಕೋಟಿ ರೂ. ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ವಂಚನೆ ಪ್ರಕರಣದಲ್ಲಿ 46 ವರ್ಷದ ನೆಹಾಲ್ ಮೋದಿ ಪ್ರಮುಖ ಆರೋಪಿಯಾಗಿದ್ದಾರೆ. ಇದು ಭಾರತದ ಅತಿದೊಡ್ಡ ಬ್ಯಾಂಕಿಂಗ್ ವಂಚನೆಗಳಲ್ಲಿ ಒಂದಾಗಿದೆ. ಇದನ್ನು ನೀರವ್ ಮೋದಿ, ನೇಹಾಲ್ ಮೋದಿ ಮತ್ತು ಅವರ ಚಿಕ್ಕಪ್ಪ ಮೆಹುಲ್ ಚೋಕ್ಸಿ ಸೇರಿಕೊಂಡು ಮಾಡಿದ್ದಾರೆ.
ಬೆಲ್ಜಿಯಂನಲ್ಲಿ ಹುಟ್ಟಿ ಬೆಳೆದ ನೇಹಾಲ್ ಮೋದಿ ಇಂಗ್ಲಿಷ್, ಗುಜರಾತಿ ಮತ್ತು ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. ಪ್ರಸ್ತುತ ಲಂಡನ್ ಜೈಲಿನಲ್ಲಿರುವ ಮತ್ತು ಭಾರತಕ್ಕೆ ಹಸ್ತಾಂತರ ಪ್ರಕ್ರಿಯೆಗಳನ್ನು ಎದುರಿಸುತ್ತಿರುವ ಅವರ ಸಹೋದರ ನೀರವ್ ಮೋದಿ ಪರವಾಗಿ ಅಕ್ರಮವಾಗಿ ಹಣ ವರ್ಗಾವಣೆಯಲ್ಲಿ ತೊಡಗಿರುವ ಆರೋಪ ಎದುರಿಸುತ್ತಿದ್ದಾರೆ.
ಶೆಲ್ ಕಂಪನಿಗಳು ಮತ್ತು ಸಾಗರೋತ್ತರ ವಹಿವಾಟು ನೆಟ್ ವರ್ಕ್ ಮೂಲಕ ದೊಡ್ಡ ಮೊತ್ತದ ಅಕ್ರಮ ಹಣ ವರ್ಗಾವಣೆಯಲ್ಲಿ ನೇಹಾಲ್ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇಡಿ ಚಾರ್ಜ್‌ಶೀಟ್‌ನಲ್ಲಿ ಆತನ ಹೆಸರನ್ನು ಉಲ್ಲೇಖಿಸಿದೆ. ನೀರವ್ ಮೋದಿಯ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದ ಸಾಕ್ಷಿ ನಾಶಪಡಿಸಿದ ಆರೋಪವನ್ನು ದಾಖಲಿಸಿದೆ.
ಪಿಎನ್‌ಬಿ ವಂಚನೆ ಬೆಳಕಿಗೆ ಬಂದ ನಂತರ ನೀರವ್‌ನ ಆಪ್ತ ಮಿಹಿರ್ ಆರ್ ಬನ್ಸಾಲಿಯೊಂದಿಗೆ ನೇಹಾಲ್ ಮೋದಿ ದುಬೈನಿಂದ 50 ಕೆಜಿ ಚಿನ್ನ ಮತ್ತು ಗಣನೀಯ ಪ್ರಮಾಣದ ಹಣವನ್ನು ಸಾಗಿಸಿದ್ದಾರೆ ಎಂದು ಇಡಿ ಆರೋಪಿಸಿದೆ. ನೇಹಾಲ್ ಹೆಸರನ್ನು ಅಧಿಕಾರಿಗಳಿಗೆ ಬಹಿರಂಗಪಡಿಸದಂತೆ ಅವರು ಡಮ್ಮಿ ನಿರ್ದೇಶಕರಿಗೆ ಸೂಚಿಸಿದ್ದರು ಎಂದು ವರದಿಯಾಗಿದೆ.
Advertisement