
ತಿರುವನಂತಪುರಂ: ಕಳೆದ 19 ದಿನಗಳಿಂದ ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ (Thiruvananthapuram International Airport) ಅನಾಥವಾಗಿ ನಿಂತಿದ್ದ ಬ್ರಿಟನ್ ರಾಯಲ್ ನೇವಿಯ F-35B Fighter Jet ವಿಮಾನವನ್ನು ಬ್ರಿಟನ್ ಗೆ ರವಾನೆ ಮಾಡಲು ಕ್ಷಣಗಣನೆ ಆರಂಭವಾಗಿದೆ.
ಬ್ರಿಟಿಷ್ F-35B ಸ್ಟೆಲ್ತ್ ಫೈಟರ್ ಜೆಟ್ ಕೇರಳದ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಿರೀಕ್ಷಿತ ಲ್ಯಾಂಡಿಂಗ್ ಮಾಡಿದ ಹತ್ತೊಂಬತ್ತು ದಿನಗಳ ನಂತರ ಅದನ್ನು ಬ್ರಿಟನ್ ಗೆ ವಾಪಸ್ ಕಳುಹಿಸಲಾಗುತ್ತಿದೆ.
ವಿಮಾನದ ದುರಸ್ತಿಕಾರ್ಯ ಪೂರ್ಣಗೊಳ್ಳದ ಕಾರಣ ಯುನೈಟೆಡ್ ಕಿಂಗ್‌ಡಮ್ ಗೆ ಭಾರತದ C-17 ಗ್ಲೋಬ್‌ಮಾಸ್ಟರ್ ಸಾರಿಗೆ ವಿಮಾನದಲ್ಲಿ ಫೈಟರ್ ಜೆಟ್ ವಿಮಾನವನ್ನು ಏರ್‌ಲಿಫ್ಟ್ ಮಾಡಲಾಗುತ್ತಿದ್ದು, ಈ ಸಂಬಂಧ ಕಾರ್ಯಾಚರಣೆಗಾಗಿ ಬ್ರಿಟಿಷ್ ರಾಯಲ್ ಏರ್ ಫೋರ್ಸ್ ಏರ್‌ಬಸ್ A400M ಅಟ್ಲಾಸ್‌ನಲ್ಲಿ ತಾಂತ್ರಿಕ ತಜ್ಞರ ತಂಡವು F-35 ಯುದ್ಧ ವಿಮಾನವನ್ನು ನಿರ್ಣಯಿಸಲು ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.
ಪ್ರಸ್ತುತ ಪಾರ್ಕಿಂಗ್ ಲಾಟ್ ನಲ್ಲಿ ನಿಂತಿದ್ದ ಬ್ರಿಟಿಷ್ F-35B ಯುದ್ಧ ವಿಮಾನವನ್ನು ಹ್ಯಾಂಗರ್‌ಗೆ ಟೋಯಿಂಗ್ ಮಾಡಿ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ಬ್ರಿಟಿಷ್ ತಂತ್ರಜ್ಞರು ಜೆಟ್ ವಿಮಾನದಲ್ಲಿನ ದೋಷವನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದಾರೆ. ಹೊಸ ಎಂಜಿನಿಯರ್‌ಗಳ ತಂಡವು ಏರ್‌ಬಸ್ A400M ಅಟ್ಲಾಸ್ ವಿಮಾನದಲ್ಲಿ ಆಗಮಿಸಿದೆ. ಅಂತೆಯೇ ಅವರು C-17 ಗ್ಲೋಬ್‌ಮಾಸ್ಟರ್ ಮಿಲಿಟರಿ ಸಾರಿಗೆ ವಿಮಾನದ ಮೂಲಕ F-35B ವಿಮಾನವನ್ನು ತಮ್ಮ ತವರು ದೇಶಕ್ಕೆ ತೆಗೆದುಕೊಂಡು ಹೋಗಲು ಯೋಚಿಸುತ್ತಿದ್ದಾರೆ.
ತಜ್ಞರು ಮತ್ತು ಎಂಜಿನಿಯರ್‌ಗಳು ಮೊದಲು ಅದನ್ನು ಸ್ಥಳೀಯವಾಗಿ ದುರಸ್ತಿ ಮಾಡಬಹುದೇ ಎಂದು ಪರಿಶೀಲಿಸಲಿದ್ದಾರೆ. ಬಳಿಕ ಅದು ಸಾಧ್ಯವಾಗಲಿಲ್ಲ ಎಂದರೆ ಸರಕು ಸಾಗಣಿಕಾ ವಿಮಾನದ ಮೂಲಕ ಡಿಸ್ಅಸೆಂಬಲ್ ಮಾಡಬೇಕೇ ಎಂದು ಪರಿಶೀಲಿಸುತ್ತಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಂದಹಾಗೆ F-35B ಫೈಟರ್ ಜೆಟ್ ಸುಮಾರು 110 ಮಿಲಿಯನ್ ಡಾಲರ್ ಗಿಂತಲೂ ಹೆಚ್ಚು ಮೌಲ್ಯದ್ದಾಗಿದೆ ಮತ್ತು ಅಭಿವೃದ್ಧಿ ವೆಚ್ಚದ ದೃಷ್ಟಿಯಿಂದ ಇದು ಅತ್ಯಂತ ದುಬಾರಿ ಫೈಟರ್ ಜೆಟ್ ಆಗಿದೆ.
ತುರ್ತು ಲ್ಯಾಂಡ್ ಆಗಿದ್ದ ವಿಮಾನ
ಭಾರತ-ಯುಕೆ ನೌಕಾಪಡೆಯ ನಿಯಮಿತ ತರಬೇಚಿ ನಂತರ ಜೂನ್ 15 ರಂದು ಸ್ಥಳೀಯ ಸಮಯ ಬೆಳಿಗ್ಗೆ 9:30 ರ ಸುಮಾರಿಗೆ F-35B Fighter Jet ವಿಮಾನವು ತುರ್ತು ಲ್ಯಾಂಡಿಂಗ್ ಮಾಡಿತು. ವಿಮಾನವು ನಿರೀಕ್ಷೆಗಿಂತ ಕಡಿಮೆ ಇಂಧನ ಮಟ್ಟವನ್ನು ಹೊಂದಿತ್ತು. ಇದು ತುರ್ತು ಲ್ಯಾಂಡಿಂಗ್ ಗೆ ಕಾರಣವಾಯಿತು. ತುರ್ತು ಲ್ಯಾಂಡಿಂಗ್ ಬಳಿಕ ಮರುದಿನವೇ ವಿಮಾನದ ಪೈಲಟ್ ಅನ್ನು ರಾಯಲ್ ನೇವಿ AW101 ಮೆರ್ಲಿನ್ ಹೆಲಿಕಾಪ್ಟರ್ ಮೂಲಕ HMS ಪ್ರಿನ್ಸ್ ಆಫ್ ವೇಲ್ಸ್‌ಗೆ ಮರಳಿದ್ದರು. ಅಂದಿನಿಂದ ಈ ಜೆಟ್ ವಿಮಾನ ತಿರುವನಂತಪುರ ವಿಮಾನ ನಿಲ್ದಾಣದಲ್ಲಿಯೇ ಭದ್ರತೆಯಲ್ಲಿ ನಿಂತಿತ್ತು.
Advertisement