
ಬೆಂಗಳೂರು: ಭಾರತವು ಹಿಂದೆ ಕಳೆದುಹೋದ ಬಗ್ಗೆ ಮಾತಾಡಿಕೊಂಡು ಜಡವಾಗಿ ಕೂರುವ ಬದಲು ಭವಿಷ್ಯದ ವಿಶ್ವ ಕ್ರಮವನ್ನು ರೂಪಿಸುವಲ್ಲಿ ನಿಜವಾದ ಪಾತ್ರವನ್ನು ಹೊಂದಲು ಬಯಸುತ್ತಿದ್ದರೆ, 'ವಿಶ್ವ ಗುರು' ಆಗುವ ಕನಸನ್ನು ಮೀರಿ ಮುಂದುವರಿಯಬೇಕು ಎಂದು ಲೇಖಕ ಮತ್ತು ಬಿಜೆಪಿ ನಾಯಕ ಡಾ. ರಾಮ್ ಮಾಧವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದು ಸೋಮಾರಿಯಾಗಿರಲು ಅಥವಾ ನಮ್ಮ ಭೂತಕಾಲದ ಬಗ್ಗೆ ಹೆಮ್ಮೆ ಪಟ್ಟುಕೊಂಡು ಕೂರುವ ಸಮಯವಲ್ಲ. ಇಂದು ಜಗತ್ತು ವೇಗವಾಗಿ ಬದಲಾಗುತ್ತಿದೆ, ಭಾರತವು ಒಗ್ಗಟ್ಟಿನಿಂದ ಉಳಿದು ಆರ್ಥಿಕವಾಗಿ ಬಲವಾಗಿ ಬೆಳೆಯುವ ಮೂಲಕ ಮತ್ತು ತಂತ್ರಜ್ಞಾನದಲ್ಲಿ ಮುನ್ನಡೆಸುವ ಮೂಲಕ ವೇಗವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿದರು.
ಕಳೆದ ವಾರ ದೆಹಲಿಯಲ್ಲಿ ಬಿಡುಗಡೆಯಾದ ಅವರ ಪುಸ್ತಕ "ದಿ ನ್ಯೂ ವರ್ಲ್ಡ್ - 21 ನೇ ಶತಮಾನದ ಜಾಗತಿಕ ಕ್ರಮ ಮತ್ತು ಭಾರತ" ಕುರಿತ ಪುಸ್ತಕ ಚರ್ಚೆಯಲ್ಲಿ ಅವರು ಮಾತನಾಡುತ್ತಿದ್ದರು. ಜಾಗತಿಕ ಶಕ್ತಿ ಹೇಗೆ ಬದಲಾಗುತ್ತಿದೆ ಮತ್ತು ಭಾರತ ಮುಂದಿನ ಸ್ಥಾನದಲ್ಲಿ ನಿಲ್ಲಲು ಏನು ಮಾಡಬೇಕು ಎಂಬುದನ್ನು ಜನರಿಗೆ ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದು ಈ ಪುಸ್ತಕದ ಉದ್ದೇಶವಾಗಿದೆ ಎಂದು ಹೇಳಿದರು.
ಪಾಶ್ಚಿಮಾತ್ಯ ಶಕ್ತಿಗಳ ನೇತೃತ್ವದ ಹಳೆದ ವಿಶ್ವ ಕ್ರಮವು ಕುಸಿಯುತ್ತಿದೆ. ಇಂದಿನ ಜಗತ್ತು ಯುಎಸ್ ಮತ್ತು ಚೀನಾದಂತಹ ದೊಡ್ಡ ದೇಶಗಳಿಂದ ಮಾತ್ರವಲ್ಲ, ತಂತ್ರಜ್ಞಾನ ತಜ್ಞರು, ಹೂಡಿಕೆದಾರರು, ಎನ್‌ಜಿಒಗಳು ಮತ್ತು ಭಯೋತ್ಪಾದಕ ಗುಂಪುಗಳಿಂದ ಕೂಡ ರೂಪಿಸಲ್ಪಟ್ಟಿದೆ. ಇದು ಕೇವಲ ಬಹುಧ್ರುವೀಯ ಜಗತ್ತು ಅಲ್ಲ, ಇದು ಭಿನ್ನಧ್ರುವೀಯ ಜಗತ್ತು, ಇಲ್ಲಿ ಹಲವು ರೀತಿಯ ಶಕ್ತಿಗಳು ಅಸ್ತಿತ್ವದಲ್ಲಿವೆ ಎಂದು ಹೇಳಿದರು.
ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ಉಕ್ರೇನ್ ತನ್ನ ಸಂವಹನವನ್ನು ಪುನಃಸ್ಥಾಪಿಸಲು ಸಹಾಯ ಮಾಡಿದ ಎಲೋನ್ ಮಸ್ಕ್ ನ್ನು ಮತ್ತು ಹಂಗೇರಿಯ ಪ್ರಧಾನಿ ಹೂಡಿಕೆದಾರರನ್ನು ದೇಶಕ್ಕೆ ದೊಡ್ಡ ಬೆದರಿಕೆ ಎಂದು ಕರೆದ ಉದಾಹರಣೆಯನ್ನು ಅವರು ನೀಡಿದರು.
ಇದು ಹೊಸ ವಾಸ್ತವ - ಹಣ ಮತ್ತು ತಂತ್ರಜ್ಞಾನ ಹೊಂದಿರುವ ವ್ಯಕ್ತಿಗಳು ಸರ್ಕಾರಗಳಿಗೆ ಸವಾಲು ಹಾಕುತ್ತಾರೆ. ಇಂದಿನ ಜಗತ್ತಿನಲ್ಲಿ, ದೇಶಗಳು ಶಕ್ತಿಶಾಲಿಯಾಗಿ ಉಳಿಯಲು ಎಐ, ಕ್ವಾಂಟಮ್ ಕಂಪ್ಯೂಟಿಂಗ್, ರೊಬೊಟಿಕ್ಸ್ ಮತ್ತು ಬಯೋಟೆಕ್‌ನಂತಹ ಸುಧಾರಿತ ತಂತ್ರಜ್ಞಾನದ ಅಗತ್ಯವಿದೆ ಎಂದರು.
ಕಳೆದ ಶತಮಾನದಲ್ಲಿ, ವ್ಯಾಪಾರ ಮತ್ತು ಆರ್ಥಿಕತೆಯು ದೇಶಗಳಿಗೆ ಬಲವನ್ನು ನೀಡಿತು. ಈ ಶತಮಾನದಲ್ಲಿ, ಇದು ಆಳವಾದ ತಂತ್ರಜ್ಞಾನವಾಗಿರುತ್ತದೆ ಎಂದು ಅವರು ಹೇಳಿದರು. ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ಸಂಶೋಧನೆಯಂತಹ ಕ್ಷೇತ್ರಗಳಲ್ಲಿ ಭಾರತ ಇನ್ನೂ ಹೇಗೆ ಹಿಂದುಳಿದಿದೆ ಎಂಬುದನ್ನು ಸಹ ಅವರು ವಾದಿಸಿದರು.
ಬೇರೆ ಕಂಪನಿಗಳು 2ಎನ್ ಎಂ ವಿನ್ಯಾಸಗಳಲ್ಲಿ ಕೆಲಸ ಮಾಡುತ್ತಿರುವಾಗ ನಾವು 28ಎನ್ ಎಂ ಚಿಪ್‌ಗಳಿಗಾಗಿ ಘಟಕಗಳನ್ನು ನಿರ್ಮಿಸುತ್ತಿದ್ದೇವೆ. ನಾವು ಇನ್ನೂ ಎಷ್ಟು ದೂರ ಹೋಗಬೇಕು ಎಂಬುದನ್ನು ಇದು ತೋರಿಸುತ್ತದೆ. ನಾವು 10 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ತಲುಪಿದರೂ, ನಮ್ಮ ತಲಾ ಆದಾಯವು ಇನ್ನೂ ಚೀನಾದ ಅರ್ಧದಷ್ಟು ಇರುತ್ತದೆ. ನಾವು ಇನ್ನಷ್ಟು ಶ್ರಮಿಸಬೇಕಿದೆ ಎಂದರು.
Advertisement