
ಕೊಚ್ಚಿ: ಆನೆಗಳು ಸಸ್ಯಾಹಾರಿಗಳು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಕೇರಳದ ಕಾಡಾನೆಗಳು ಇದೀಗ ಚಿಕನ್ ತಿನ್ನಲು ಪ್ರಾರಂಭಿಸಿವೆ!. ಹೌದು, ಇದು ವಿಚಿತ್ರ ಎನಿಸಿದರೂ ಸತ್ಯ. ಇಲ್ಲಿನ ಆನೆಗಳು ಚಿಕನ್ ಕರಿ, ಎಗ್ ಮಸಾಲಾ, ಚಪಾತಿ ಮತ್ತು ಪರೋಟಾದಂತಹ ಬೇಯಿಸಿದ ಆಹಾರಕ್ಕೆ ಹಸಿವನ್ನು ಬೆಳೆಸಿಕೊಂಡಿವೆ. ರೆಸ್ಟೋರೆಂಟ್‌ಗಳಲ್ಲಿ ಮಿಗುವ ಆಹಾರ ತ್ಯಾಜ್ಯವನ್ನು ಅರಣ್ಯದ ಅಂಚಿನಲ್ಲಿ ತಂದು ಸುರಿಯುವ ಪ್ರವೃತ್ತಿಯಿಂದಾಗಿ ಆನೆಗಳು ಇದೀಗ ಅಪಾಯಕ್ಕೆ ಸಿಲುಕಿವೆ.
ಪರಂಬಿಕುಲಂ ಹುಲಿ ಸಂರಕ್ಷಿತ ಪ್ರದೇಶದ ಅಲ್ಲಿಮೂಪ್ಪನ್ ಬುಡಕಟ್ಟು ಜನಾಂಗಕ್ಕೆ ಸೇರಿದ ರಾಮನ್ ಪ್ರಕಾರ, ಆನೆಗಳು ಆಹಾರ ತ್ಯಾಜ್ಯವನ್ನು ಹುಡುಕಿಕೊಂಡು ಅರಣ್ಯದ ಅಂಚಿನಲ್ಲಿ ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿವೆ. ಈ ತ್ಯಾಜ್ಯಗಳನ್ನು ಇಲ್ಲಿ ಸುರಿಯುವುದರಿಂದ ಆನೆಗಳ ಆರೋಗ್ಯಕ್ಕೆ ಅಪಾಯವಾಗುವುದಲ್ಲದೆ, ಈ ಪ್ರದೇಶದಲ್ಲಿ ಮಾನವ-ವನ್ಯಜೀವಿ ಸಂಘರ್ಷದ ಸಾಧ್ಯತೆಯೂ ಹೆಚ್ಚುತ್ತದೆ ಎಂದರು.
'ಇದು ಕೇವಲ ಆನೆಗಳಿಗೆ ಮಾತ್ರವಲ್ಲ, ಎಲ್ಲ ಕಾಡು ಪ್ರಾಣಿಗಳೂ ಇದೀಗ ಉಪ್ಪು ಸೇರಿಸಿದ ಆಹಾರವನ್ನು ಹರಸುತ್ತಿವೆ. ಅರಣ್ಯದ ಗಡಿ ಪ್ರದೇಶಗಳಲ್ಲಿ ಆಹಾರ ತ್ಯಾಜ್ಯವನ್ನು ಎಸೆಯುವುದನ್ನು ವಿರೋಧಿಸಲು ನಾವು ಅಭಿಯಾನವನ್ನು ನಡೆಸುತ್ತಿದ್ದೇವೆ' ಎಂದು ಹೇಳಿದರು.
'ಆನೆಗಳು, ಕೋತಿಗಳು, ಜಿಂಕೆಗಳು ಮತ್ತು ಕಾಡು ಹಂದಿಗಳಂತಹ ಕಾಡು ಪ್ರಾಣಿಗಳು ಆಹಾರ ತ್ಯಾಜ್ಯವನ್ನು ತಿನ್ನುವ ನಿದರ್ಶನಗಳು ಕೇರಳದಲ್ಲಿ ಹೆಚ್ಚು ಸಾಮಾನ್ಯವಾಗಿದೆ' ಎಂದು ಮಾನವ-ವನ್ಯಜೀವಿ ಸಂಘರ್ಷವನ್ನು ಅಧ್ಯಯನ ಮಾಡಲು ರಾಜ್ಯದಾದ್ಯಂತ ಬುಡಕಟ್ಟು ಕುಗ್ರಾಮಗಳಿಗೆ ಭೇಟಿ ನೀಡಿರುವ ಅರಣ್ಯಾಧಿಕಾರಿ ರಾಜು ಕೆ ಫ್ರಾನ್ಸಿಸ್ ತಿಳಿಸಿದರು.
'ಪ್ಯಾಕ್ ಮಾಡಿದ ಚಿಪ್ಸ್‌ನಲ್ಲಿನ ಉಪ್ಪಿನ ರುಚಿ ಕಾಡು ಪ್ರಾಣಿಗಳನ್ನು ಆಕರ್ಷಿಸುತ್ತದೆ. ಚಿಪ್ಸ್ ತಿನ್ನುವಾಗ, ಪ್ರಾಣಿಗಳು ಪ್ಲಾಸ್ಟಿಕ್ ತುಂಡುಗಳನ್ನು ಸಹ ಸೇವಿಸುತ್ತವೆ. ಇದು ಅವುಗಳ ಜೀರ್ಣಾಂಗಗಳಿಗೆ ಹಾನಿಯುಂಟುಮಾಡುತ್ತದೆ ಮತ್ತು ಸಾವಿಗೆ ಕಾರಣವಾಗುತ್ತದೆ' ಎಂದು ಅವರು ಹೇಳಿದರು.
'ಕೆಲವು ಪ್ರವಾಸಿ ತಾಣಗಳಲ್ಲಿ ಯುವಕರು ಕೋತಿಗಳಿಗೆ ಕುರುಕಲು ತಿಂಡಿ ಮತ್ತು ಆಲೂಗೆಡ್ಡೆ ಚಿಪ್ಸ್ ಅನ್ನು ನೀಡುತ್ತಿರುವುದನ್ನು ನಾವು ಗಮನಿಸಿದ್ದೇವೆ. ಬಳಿಕ ಈ ಕೋತಿಗಳು ಉಪ್ಪು ಹಾಕಿರುವ ಆಹಾರವನ್ನೇ ತಿನ್ನುವ ಹಂಬಲ ಬೆಳೆಸಿಕೊಳ್ಳುತ್ತವೆ ಮತ್ತು ಇದರ ಪರಿಣಾಮಗಳನ್ನು ಅರಣ್ಯದ ಅಂಚಿನಲ್ಲಿ ವಾಸಿಸುವ ಜನರು ಅನುಭವಿಸುತ್ತಾರೆ. ಈ ಪ್ರಾಣಿಗಳು ಮನೆಗಳು ಮತ್ತು ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಆದ್ದರಿಂದ ನಾವು ಪ್ಲಾಸ್ಟಿಕ್ ಕವರ್‌ನಲ್ಲಿ ಪ್ಯಾಕ್ ಮಾಡಿದ ಆಹಾರವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲು ಪ್ರವಾಸಿಗರಿಗೆ ಸಲಹೆ ನೀಡುತ್ತಿದ್ದೇವೆ' ಎಂದು ಅವರು ಹೇಳಿದರು.
ಬುಡಕಟ್ಟು ಸಮುದಾಯಗಳು ಆನೆಗಳನ್ನು ದೈವತ್ವದ ಸ್ವರೂಪವಾಗಿ ನೋಡುತ್ತವೆ. ಆದರೆ, ಇತರ ನಿವಾಸಿಗಳು ಕಾಡಾನೆಗಳು ಕೃಷಿ ಭೂಮಿಗೆ ಪ್ರವೇಶಿಸುವುದನ್ನು ತಡೆಯಲು ಅನೈತಿಕ ಮಾರ್ಗಗಳನ್ನು ಬಳಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಕಾಡಾನೆಗಳ ದೇಹದಲ್ಲಿ ಗುಳಿಗೆಗಳು ಇರುವುದು ಅರಣ್ಯ ಪಶುವೈದ್ಯರಿಗೆ ತಿಳಿದುಬಂದಿದೆ. ತಮ್ಮ ಕೃಷಿ ಭೂಮಿಗೆ ನುಗ್ಗುವ ಕಾಡಾನೆಗಳನ್ನು ಓಡಿಸಲು ಜನರು ಕಲ್ಲು ತೂರಾಟ, ಬೆಂಕಿ ಹಚ್ಚಿ ಟೈರ್‌ಗಳನ್ನು ಎಸೆಯುವುದು, ಪಟಾಕಿ ಸಿಡಿಸುತ್ತಾರೆ. ಆದರೆ, ಈ ತಂತ್ರಗಳು ಆನೆಗಳನ್ನು ಮತ್ತಷ್ಟು ಆಕ್ರಮಣಕಾರಿಯನ್ನಾಗಿ ಮಾಡುತ್ತವೆ.
'ನಾವು ಕಾಡುಪ್ರಾಣಿಗಳೊಂದಿಗೆ ಸೌಹಾರ್ದಯುತವಾಗಿ ಬದುಕುತ್ತೇವೆ. ಕಾಡು ಪ್ರಾಣಿಗಳನ್ನು ನಮ್ಮಿಂದ ದೂರವಿಡಲು ಸಹಾಯ ಮಾಡುವ ಶುಂಠಿ, ಅರಿಶಿನ ಮತ್ತು ಇತರ ಕೆಲವು ಸಸ್ಯಗಳನ್ನು ಬೆಳೆಸುತ್ತೇವೆ. ನಮ್ಮ ಪೂರ್ವಜರಿಗೆ 'ಆನಕೆಟ್ಟು ಮಂತ್ರ' ಮತ್ತು 'ಕೈಚೂಂಡಿ ಮಂತ್ರ' ತಿಳಿದಿತ್ತು. ಅದರ ಮೂಲಕ ಅವರು ಕಾಡಾನೆಗಳೊಂದಿಗೆ ಮಾತುಕತೆ ನಡೆಸುತ್ತಾರೆ. ನಾಯಿಗಳು ಬುಡಕಟ್ಟು ಜನಾಂಗದವರ ಅತ್ಯುತ್ತಮ ಒಡನಾಡಿಗಳಾಗಿವೆ' ಎನ್ನುತ್ತಾರೆ ವಯನಾಡಿನ ಬುಡಕಟ್ಟು ಜನಾಂಗದ ವ್ಯಕ್ತಿ.
ಇಡುಕ್ಕಿ ಜಿಲ್ಲೆಯ ಎಡಮಲಕ್ಕುಡಿಯ ಬುಡಕಟ್ಟು ಸಮುದಾಯವು ‘ಇಲಂತರಿಕೂಟಂ’ ಎಂಬ ಯುವಕರ ಗುಂಪನ್ನು ಹೊಂದಿತ್ತು. ಅವರು ಹಗಲು ವೇಳೆಯಲ್ಲಿ ಕೃಷಿಭೂಮಿಗಳ ಬಳಿ ರಾತ್ರಿ ವೇಳೆ ಬರುವ ಆನೆ ಹಿಂಡುಗಳನ್ನು ಗುರುತಿಸುತ್ತಿದ್ದರು. ಇಳಂತರಿಕೂಟಂ ಸದಸ್ಯರು ಆನೆಗಳನ್ನು ಓಡಿಸಲು ದೊಡ್ಡ ಶಬ್ದಗಳನ್ನು ಮಾಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಈ ಸಂಸ್ಕೃತಿ ಮಾಯವಾಗಿದೆ ಎನ್ನುತ್ತಾರೆ ಪೂಚಪ್ರಾ ಬಡಾವಣೆಯ ಬುಡಕಟ್ಟು ವ್ಯಕ್ತಿ ಶಶಿ.
'ಅನಾನಸ್ ಮತ್ತು ಬಾಳೆಹಣ್ಣು ಆನೆಗಳನ್ನು ಆಕರ್ಷಿಸುತ್ತದೆ. ಆನೆಗೆ ದಿನಕ್ಕೆ 80,000 ಕ್ಯಾಲೋರಿಗಳು ಬೇಕಾಗುತ್ತವೆ. ಇದನ್ನು ಪೂರೈಸಿಕೊಳ್ಳಲು ಆನೆಗಳು ಕಾಡಿನಲ್ಲಿ ದಿನನಿತ್ಯ ಸುಮಾರು 16 ಗಂಟೆಗಳ ಕಾಲ ಪ್ರಯಾಣಿಸಬೇಕಾಗುತ್ತದೆ. ಆದರೆ, ಅನಾನಸ್ ಫಾರ್ಮ್ ಅಥವಾ ಬಾಳೆ ತೋಟವು ಕೆಲವೇ ಗಂಟೆಗಳಲ್ಲಿ ಅಗತ್ಯವಾದ ಪೋಷಣೆಯನ್ನು ಅವುಗಳಿಗೆ ಒದಗಿಸುತ್ತದೆ' ಎಂದು ಅರಣ್ಯ ಅಧಿಕಾರಿ ಹೇಳಿದರು.
Advertisement