
ರಾಂಚಿ: ಚೀನಾದ ಸೈಬರ್ ಕ್ರಿಮಿನಲ್ ಗಳಿಗಾಗಿ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದ ಏಳು ಜನರನ್ನು ಜಾರ್ಖಂಡ್‌ನ ಅಪರಾಧ ತನಿಖಾ ಬ್ಯೂರೋ (CID)ಸೈಬರ್ ಕ್ರೈಂ ಬ್ರಾಂಚ್ ಬಂಧಿಸಿದೆ.
ಈ ಸಂಬಂಧ ಜುಲೈ 4 ರಂದು ಸಿಐಡಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ರಾಂಚಿಯ ಹೋಟೆಲ್ ಒಂದರಲ್ಲಿ ಡಿಜಿಟಲ್ ಆರೆಸ್ಟ್ ಮತ್ತು ಹೂಡಿಕೆಯ ಹೆಸರಿನಲ್ಲಿ ಸೈಬರ್ ಕ್ರಿಮಿನಲ್‌ಗಳ ಗ್ಯಾಂಗ್ ವಂಚನೆಯ ಚಟುವಟಿಕೆ ನಡೆಸುತ್ತಿದ್ದ ಬಗ್ಗೆ ಸೈಬರ್ ಪೊಲೀಸ್ ಠಾಣೆಗೆ ಗೌಪ್ಯ ಮಾಹಿತಿ ಸಿಕ್ಕಿತು. ಈ ಮಾಹಿತಿಯ ಮೇರೆಗೆ ಸೈಬರ್ ಕ್ರೈಂ ಬ್ರಾಂಚ್ ಹೋಟೆಲ್ ಮೇಲೆ ದಾಳಿ ನಡೆಸಿ ಏಳು ಸೈಬರ್ ಅಪರಾಧಿಗಳನ್ನು ಬಂಧಿಸಿದೆ ಎಂದು ತಿಳಿಸಲಾಗಿದೆ.
ಬಂಧಿತ ಸೈಬರ್ ಕ್ರಿಮಿನಲ್‌ಗಳಿಂದ 12 ಮೊಬೈಲ್‌ಗಳು, 11 ಲ್ಯಾಪ್‌ಟಾಪ್‌ಗಳು, 14 ಎಟಿಎಂಗಳು, ಚೆಕ್‌ಬುಕ್‌ಗಳು ಮತ್ತು 60 ಕ್ಕೂ ಹೆಚ್ಚು ವಾಟ್ಸಾಪ್ ಮತ್ತು ಟೆಲಿಗ್ರಾಂ ಚಾಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಐಡಿ ಅಧಿಕೃತ ಪ್ರಕಟಣೆ ತಿಳಿಸಿದೆ.
ಬಂಧಿತರೆಲ್ಲರೂ ಚೀನಾದ ಸೈಬರ್ ಅಪರಾಧಿಗಳಿಗಾಗಿ ಕೆಲಸ ಮಾಡುತ್ತಿರುವ ಭಾರತೀಯ ಏಜೆಂಟ್ ಆಗಿದ್ದಾರೆ ಎಂದು ಸಿಐಡಿಯ ಸೈಬರ್ ಕ್ರೈಂ ಬ್ರಾಂಚ್ ಹೇಳಿದೆ. ಬಂಧಿತ ಸೈಬರ್ ಅಪರಾಧಿಗಳು ಚೀನಾದ ಸಿಂಡಿಕೇಟ್‌ಗಳಿಗೆ ದೇಶದ ವಿವಿಧ ಭಾಗಗಳಿಂದ ಅಕ್ರಮವಾಗಿ ಬ್ಯಾಂಕ್ ಖಾತೆ ತೆರೆದಿದ್ದರು. ಬಂಧಿತರಲ್ಲಿ ಮೂನ್‌ಪೇ, ಡ್ರಾಗನ್‌ಪೇ, ಸೂಪರ್‌ಪೇ ಮತ್ತು ಮಂಗೋಪಾಯಿಂಡಿಯಾ ಮುಂತಾದ ಚೀನಾದ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದ ವಿಶೇಷ ಏಜೆಂಟ್ ಒಬ್ಬರು ಇದ್ದಾರೆ.
ತನಿಖೆ ವೇಳೆ ಚೀನಾ ಸಿಂಡಿಕೇಟ್‌ಗೆ ಲಿಂಕ್ ಮಾಡಲಾದ ದೊಡ್ಡ ಪ್ರಮಾಣದ ಬ್ಯಾಂಕ್ ಖಾತೆ ವಿವರಗಳನ್ನು ಹೊಂದಿರುವ ವಾಟ್ಸಾಪ್ ಮತ್ತು ಟೆಲಿಗ್ರಾಮ್ ಚಾಟ್‌ಗಳು ಸೇರಿದಂತೆ ಗಮನಾರ್ಹ ಸಂಖ್ಯೆಯ ಡಿಜಿಟಲ್ ಪುರಾವೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಟೆಲಿಗ್ರಾಂ ಮೂಲಕ ಭಾರತೀಯ ಏಜೆಂಟ್‌ಗಳಿಗೆ ಚೀನಾದಿಂದ ಆ್ಯಪ್ ಒಂದನ್ನು ಕಳುಹಿಸಲಾಗುತಿತ್ತು. ಭಾರತದಲ್ಲಿನ ಸೈಬರ್ ಅಪರಾಧಿಗಳು ಈ ಆ್ಯಪ್ ಬಳಸಿಕೊಂಡು ಸಿಮ್ ಕಾರ್ಡ್‌ಗಳಲ್ಲಿ ಬ್ಯಾಂಕ್-ಸಂಬಂಧಿತ ಡೇಟಾ ಅಳವಡಿಸುತ್ತಿದ್ದರು. ಬಂಧಿತರೆಲ್ಲರೂ ಚೀನಾ ಕಂಪನಿಗಳ ಪರವಾಗಿ ಭಾರತದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ವಿವಿಧ ರಾಜ್ಯಗಳಲ್ಲಿ ದಾಖಲಾದ ಹೂಡಿಕೆ ಹಗರಣಗಳು ಮತ್ತು ಡಿಜಿಟಲ್ ಆರೆಸ್ಟ್ ಪ್ರಕರಣಗಳಿಗೆ ಸಂಬಂಧಿಸಿದ ದೂರುಗಳಲ್ಲಿ ಬಂಧಿತ ಚೀನೀ ಏಜೆಂಟ್‌ಗಳ ಬ್ಯಾಂಕ್ ಖಾತೆಗಳ ಲಿಂಕ್‌ಗಳು ಕಂಡುಬಂದಿವೆ. ಈ ದೂರುಗಳನ್ನು NCPCR ಪೋರ್ಟಲ್‌ನಲ್ಲಿ ದಾಖಲಿಸಲಾಗಿದೆ. ಈ ಗ್ಯಾಂಗ್ ವಿರುದ್ಧ ದೇಶಾದ್ಯಂತ ಒಟ್ಟು 68 ದೂರುಗಳು ದಾಖಲಾಗಿವೆ. ಇವರೆಲ್ಲರೂ ಬಿಹಾರ ಮತ್ತು ಮಧ್ಯಪ್ರದೇಶದವರಾಗಿದ್ದಾರೆ.
Advertisement