
ಬೆಂಗಳೂರು: 'ಡಿಜಿಟಲ್ ಬಂಧನ' ಭೀತಿಯ ನಂತರ ಸೈಬರ್ ವಂಚಕರು ಹಣ ದೋಚಲು ಹೊಸ ತಂತ್ರ ಹುಡುಕಿಕೊಂಡಿದ್ದಾರೆ. ಉಚಿತ ಮೊಬೈಲ್ ಅಥವಾ ಟ್ಯಾಬ್ಲೆಟ್ ಗಿಫ್ಟ್ ಆಮಿಷವೊಡ್ಡುವ ಮೂಲಕ ಕೋಟ್ಯಂತರ ರೂ. ವಂಚನೆ ಮಾಡಲಾಗುತ್ತಿದೆ.
ಬ್ಯಾಂಕ್ ನವರು ಎಂದು ಹೇಳಿಕೊಂಡು ಅಪರಿಚಿತ ವ್ಯಕ್ತಿಗಳು ಮನೆ ಬಾಗಿಲಿಗೆ ಗಿಫ್ಟ್ ಕಳುಹಿಸುವ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ಇದನ್ನು ನಂಬಬೇಡಿ, ಹುಷಾರಾಗಿರಿ. ಇದು ಸೈಬರ್ ವಂಚಕರು ಮಾಡುವ ವಂಚನೆಯ ಜಾಲವಾಗಿದೆ.
ಈ ಮೊಬೈಲ್ ಗೆ ಒಂದು ಬಾರಿ ಸಿಮ್ ಕಾರ್ಡ್ ಹಾಕಿದ ನಂತರ ಎಲ್ಲಾ ಬ್ಯಾಂಕ್ ವಿವರ ವಂಚಕರ ಪಾಲಾಗುತ್ತದೆ. ವೈಟ್ ಫೀಲ್ಡ್ ನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಇಂತಹದೊಂದು ಪ್ರಕರಣ ದಾಖಲಾಗಿದ್ದು, ಟೆಕ್ಕಿಯೊಬ್ಬರು ರೂ. 2.8 ಕೋಟಿ ಕಳೆದುಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ವೈಟ್‌ಫೀಲ್ಡ್ ಉಪ ಪೊಲೀಸ್ ಆಯುಕ್ತ ಶಿವಕುಮಾರ್ ಗುಣಾರೆ, ಇತ್ತೀಚೆಗೆ ನಗರದಲ್ಲಿ ಈ ಹೊಸ ರೀತಿಯ ಸೈಬರ್ ವಂಚನೆ ವರದಿಯಾಗಿದ್ದು, ಖಾಸಗಿ ಬ್ಯಾಂಕ್ ಪ್ರತಿನಿಧಿಯಂತೆ ವಂಚಕರೊಬ್ಬರು ಸಾಫ್ಟ್‌ವೇರ್ ಎಂಜಿನಿಯರ್‌ಗೆ ಮೊಬೈಲ್ ಫೋನ್ ಉಡುಗೊರೆಯಾಗಿ ಕಳುಹಿಸಿದ್ದಾರೆ. ಬ್ಯಾಂಕ್ ನಿಂದ ಕ್ರೇಡಿಟ್ ಕಾರ್ಡ್ ಮಂಜೂರಾಗಿದ್ದು, ಉತ್ತಮ ಕ್ರೇಡಿಟ್ ಸ್ಕೋರ್ ಗಾಗಿ ಉಚಿತವಾಗಿ ಮೊಬೈಲ್ ಫೋನ್ ಗಿಫ್ಟ್ ಪಡೆಯಲು ಅರ್ಹರಾಗಿದ್ದೀರಾ ಎಂದು ನಂಬಿಸಲಾಗಿದೆ. ಇದಕ್ಕೂ ಮುನ್ನಾ ಕ್ರೆಡಿಟ್ ಕಾರ್ಡ್ ನೊಂದಿಗೆ ಟೆಕ್ಕಿಯನ್ನು ವಂಚಕ ಸಂಪರ್ಕಿಸಿದ್ದು, ಕಾರ್ಡ್ ತೆಗೆದುಕೊಳ್ಳುವಂತೆ ಮನವೊಲಿಸಿದ್ದಾನೆ ಎಂದು ಹೇಳಿದರು.
ಟೆಕ್ಕಿಯ ವಿಳಾಸಕ್ಕೆ ಹೊಸ ಮೊಬೈಲ್ ಫೋನ್ ಕಳುಹಿಸಿದ ನಂತರ ಸಂತ್ರಸ್ತ ತನ್ನ ಫೋನ್ ಗೆ ಸಿಮ್ ಕಾರ್ಡ್ ಅಳವಡಿಸಿಕೊಂಡಿದ್ದಾರೆ. ಅದಕ್ಕೆ ಕ್ಲೋನಿಂಗ್ ಸಾಫ್ಟ್ ವೇರ್ ಅಳವಡಿಸಲಾಗಿರುತ್ತದೆ. ಇದರಿಂದ ಬ್ಯಾಂಕ್ ನಿಂದ ಯಾವುದೇ ಸಂದೇಶ ಅಥವಾ ಮೇಲ್ ಬಾರದಂತೆ ಮೊಬೈಲ್ ಫೋನ್ ನಲ್ಲಿ ವ್ಯವಸ್ಥೆ ಮಾಡಲಾಗಿರುತ್ತದೆ. ಒಂದು ವಾರದ ನಂತರ ತನ್ನ ಎಫ್ ಡಿ ಖಾತೆಯಿಂದ ಹಣ ಕಡಿತವಾಗಿರುವುದನ್ನು ಟೆಕ್ಕಿ ಗಮನಿಸಿದ್ದಾರೆ. ಫೋನ್ ಕ್ಲೋನ್ ಆಗಿರುವುದರಿಂದ, ಬ್ಯಾಂಕ್ ಕಳುಹಿಸಿದ OTP ವಂಚಕನ ಖಾತೆಗೆ ಹೋಗಿದೆ. ಬಳಿಕ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ, ವಂಚಕರು ಹಣವನ್ನು ಕಬಳಿಸಿರುವುದು ತಿಳಿದುಬಂದಿದೆ. ನಂತರ ಅವರು CEN ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದರು.
Advertisement