
ಬೆಂಗಳೂರು: ಕಸ್ಟಮ್ಸ್ ಮತ್ತು ಜಾರಿ ನಿರ್ದೇಶನಾಲಯ (ED)ಅಧಿಕಾರಿಗಳ ಸೋಗಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ನಿಂದ ರೂ. 11 ಕೋಟಿ ಸುಲಿಗೆ ಮಾಡಿದ್ದ ಮೂವರನ್ನು ಈಶಾನ್ಯ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಕರಣ್, ತರುಣ್ ನಥಾನಿ ಮತ್ತು ಧವಲ್ ಶಾ ಎಂದು ಗುರುತಿಸಲಾಗಿದೆ.
ಇತ್ತೀಚಿಗೆ ದೂರುದಾರ ಟೆಕ್ಕಿ ಬಳಿ ರೂ.12 ಕೋಟಿ ಇದೆ ಎಂಬುದನ್ನು ತಿಳಿದ ಆರೋಪಿಗಳು ತಮ್ಮನ್ನು ಇಡಿ ಮತ್ತು ಕಸ್ಟಮ್ಸ್ ಅಧಿಕಾರಿಗಳು ಎಂದು ಪರಿಚಯಿಸಿಕೊಂಡು ವಿವಿಧ ಸಂಖ್ಯೆಗಳಿಂದ ಅವರನ್ನು ಸಂಪರ್ಕಿಸಿದ್ದಾರೆ. ಅವರ ಖಾತೆಯಲ್ಲಿ ಅಕ್ರಮ ಹಣಕಾಸು ವಹಿವಾಟು ನಡೆದಿದೆ ಎಂದು ಆರೋಪಿಸಿ ತನಿಖೆ ನಡೆಸುವ ನೆಪದಲ್ಲಿ ಕೆವೈಸಿ ದಾಖಲೆಗಳನ್ನು ನೀಡುವಂತೆ ಒತ್ತಾಯಿಸಿದ್ದಾರೆ.
ಹಣ ವರ್ಗಾವಣೆ ಆರೋಪದೊಂದಿಗೆ ಬೆದರಿಕೆ ಹಾಕಿದ್ದು, ಕಾನೂನು ಕ್ರಮವನ್ನು ತಪ್ಪಿಸಲು ಹಣ ವರ್ಗಾವಣೆ ಮಾಡುವಂತೆ ಒತ್ತಡ ಹೇರಿದ್ದರು.
ಆರೋಪಿಗಳ ಹೇಳಿಕೆಯನ್ನು ನಂಬಿದ ಸಾಫ್ಟ್‌ವೇರ್ ಎಂಜಿನಿಯರ್ ಒಂದು ತಿಂಗಳಲ್ಲಿ ಒಂಬತ್ತು ವಿವಿಧ ಖಾತೆಗಳಿಗೆ ಹಣವನ್ನು ವರ್ಗಾಯಿಸಿದ್ದಾರೆ. ಬಳಿಕ ತಾನು ವಂಚನೆಗೆ ಒಳಗಾಗಿರುವುದನ್ನು ಅರಿತು ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಪೊಲೀಸರು ಬ್ಯಾಂಕ್ ವಹಿವಾಟುಗಳನ್ನು ವಿಶ್ಲೇಷಿಸಿದಾಗ, ಸೂರತ್‌ನ ಚಿನ್ನಾಭರಣ ಅಂಗಡಿ ಮಾಲೀಕರ ಖಾತೆಗೆ 7.5 ಕೋಟಿ ರೂ. ವರ್ಗಾವಣೆಯಾಗಿರುವುದು ತಿಳಿದುಬಂದಿದೆ. ಸೂರತ್‌ನಲ್ಲಿ ನಡೆಸಿದ ತನಿಖೆ ವೇಳೆ ಆರೋಪಿಗಳು ಸುಲಿಗೆ ಮಾಡಿದ ಹಣವನ್ನು ಚಿನ್ನ ಖರೀದಿಸಲು ಬಳಸಿರುವುದು ಪತ್ತೆಯಾಗಿದೆ.
ಬಳಿಕ ಪೊಲೀಸರು ಹಣ ವರ್ಗಾವಣೆ ಮಾಡಿರುವ ಇತರೆ ಖಾತೆಗಳ ವಿವರ ಸಂಗ್ರಹಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
Advertisement