
ತಿರುವನಂತಪುರಂ: ಕೇವಲ ಆರೇ ನಿಮಿಷದಲ್ಲಿ ಮಹಿಳಾ ಅರಣ್ಯಾಧಿಕಾರಿಯೊಬ್ಬರು 16 ಅಡಿ ಉದ್ಧದ ವಿಷಕಾರಿ ಕಿಂಗ್ ಕೋಬ್ರಾ ಹಾವನ್ನು ಸೆರೆ ಹಿಡಿದಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಕೇರಳದ ರಾಜಧಾನಿ ತಿರುವನಂತಪುರಂನ ಪೆಪ್ಪರ ಬಳಿಯ ಅಂಚುಮರುತ್ತುಮೂಡು ಗ್ರಾಮದ ಹೊಳೆಯೊಂದರಲ್ಲಿ ಅಡಗಿದ್ದ ಸುಮಾರು 14 ರಿಂದ 16 ಅಡಿ ಉದ್ದದ ಕಿಂಗ್ ಕೋಬ್ರಾ ಹಾವನ್ನು ಮಹಿಳಾ ಅರಣ್ಯಾಧಿಕಾರಿ ಜಿಎಸ್ ರೋಶ್ನಿ ಸೆರೆ ಹಿಡಿದಿದ್ದಾರೆ.
ನೀರಿನ ತೊರೆಯಲ್ಲಿ ಹಾವು ಅಡಗಿರುವ ಕುರಿತು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಮಹಿಳಾ ಅರಣ್ಯಾಧಿಕಾರಿ ರೋಶ್ನಿ ಸ್ನೇಕ್ ಕ್ಯಾಚರ್ ಸ್ಟಿಕ್ ನೆರವಿನಿಂದ ಬೃಹತ್ ಕಿಂಗ್ ಕೋಬ್ರಾ ಹಾವನ್ನು ಸೆರೆ ಹಿಡಿದಿದ್ದಾರೆ.
ಈ ಕಾರ್ಯಾಚರಣೆ ವೇಳೆ ಎರಡು ಮೂರು ಬಾರಿ ಹಾವು ರೋಶ್ನಿ ಅವರನ್ನು ಕಚ್ಚಲು ಮುಂದಾಗಿತ್ತು. ಆದರೆ ಅತ್ಯಂತ ಚಾಕಚಕ್ಯತೆಯಿಂದ ಬೃಹತ್ ಕಿಂಗ್ ಕೋಬ್ರಾ ಹಾವನ್ನು ಸೆರೆ ಹಿಡಿದು ಚೀಲಕ್ಕೆ ತುಂಬಿಸಿದ್ದಾರೆ. ಕೇವಲ 6 ನಿಮಿಷಗಳಲ್ಲಿ 20 ಕೆಜಿ ತೂಕದ ಬೃಹತ್ ಹಾವನ್ನು ಶಾಂತವಾಗಿ ವಶಪಡಿಸಿಕೊಂಡ ಅವರ ಪರಿಗೆ ಎಲ್ಲರೂ ಚಪ್ಪಾಳೆ ತಟ್ಟಿ ಶ್ಲಾಘಿಸಿದರು.
800ಕ್ಕೂ ಹೆಚ್ಚು ಹಾವುಗಳ ಹಿಡಿದಿರುವ ರೋಶ್ನಿ
ಇನ್ನು ಕೇರಳ ಅರಣ್ಯ ಇಲಾಖೆಯಲ್ಲಿ ಬೀಟ್ ಅಧಿಕಾರಿಯಾಗಿರುವ ಜಿಎಸ್ ರೋಶ್ನಿ ತಮ್ಮ 8 ವರ್ಷಗಳ ವೃತ್ತಿ ಜೀವನದಲ್ಲಿ ಈ ವರೆಗೂ ಸುಮಾರು 800ಕ್ಕೂ ಅಧಿಕ ಹಾವುಗಳನ್ನು ಸೆರೆಹಿಡಿದ್ದಾರೆ ಎಂದು ಹೇಳಲಾಗಿದೆ. ಇದೀಗ ರೋಶ್ನಿ ತಮ್ಮ ದಾಖಲೆಯ ಪುಸ್ತಕಕ್ಕೆ 15 ಅಡಿ ಉದ್ಧದ ಕಿಂಗ್ ಕೋಬ್ರಾ ಹಾವನ್ನು ಹಿಡಿಯುವ ಮೂಲಕ ಮತ್ತೊಂದು ಸೇರ್ಪಡೆ ಮಾಡಿಕೊಂಡಿದ್ದಾರೆ.
Advertisement