
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಕೆಲ ದಿನಗಳ ಭಾಗಿ ಇರುವಂತೆಯೇ ರಾಜ್ಯದ ಎಲ್ಲಾ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ. 35 ರಷ್ಟು ಮೀಸಲಾತಿಯನ್ನು ಸಿಎಂ ನಿತೀಶ್ ಕುಮಾರ್ ಮಂಗಳವಾರ ಘೋಷಿಸಿದ್ದಾರೆ. ಬಿಹಾರದ ಖಾಯಂ ನಿವಾಸಿಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ನಿತೀಶ್ ಕುಮಾರ್, ರಾಜ್ಯದ ಸರ್ಕಾರಿ ಸೇವೆಗಳಲ್ಲಿ ನೇರ ನೇಮಕಾತಿಯಾದ ಎಲ್ಲಾ ವರ್ಗದ, ಹಂತದ ಬಿಹಾರದ ಮೂಲ ನಿವಾಸಿಗಳಾದ ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ಶೇ. 35 ರಷ್ಟು ಮೀಸಲಾತಿ ಒದಗಿಸಲಾಗುವುದು. ಈ ನಿರ್ಧಾರವು ಆಡಳಿತ ಮತ್ತು ಆಡಳಿತದಲ್ಲಿ ಹೆಚ್ಚಿನ ಮಹಿಳೆಯರ ಭಾಗವಹಿಸುವಿಕೆಯತ್ತ ಒಂದು ಪ್ರಮುಖವಾದ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ.
ಪಾಟ್ನಾದಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯ ನಂತರ ಈ ಘೋಷಣೆ ಹೊರಬಿದ್ದಿದೆ. ಈ ನಿರ್ಧಾರವು ಮಹಿಳಾ ಸಬಲೀಕರಣಕ್ಕೆ ರಾಜ್ಯದ ಬದ್ಧತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಮತ್ತು ಎಲ್ಲಾ ಇಲಾಖೆಗಳಾದ್ಯಂತ ಹೆಚ್ಚಿನ ಮಹಿಳೆಯರನ್ನು ತರುವ ಗುರಿಯನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೀಸಲಾತಿಯ ಜೊತೆಗೆ, ಬಿಹಾರ ಸರ್ಕಾರ ಬಿಹಾರ ಯುವ ಆಯೋಗ ರಚನೆಗೆ ಮುಂದಾಗಿದೆ. ಇದು ರಾಜ್ಯದ ಯುವ ಜನಸಂಖ್ಯೆಯ ಅಗತ್ಯತೆಗಳು ಮತ್ತು ಆಕಾಂಕ್ಷೆಗಳನ್ನು ಈಡೇರಿಸುವ ಗುರಿ ಹೊಂದಿದೆ. ಬಿಹಾರದಲ್ಲಿನ ಯುವ ಜನಾಂಗಕ್ಕೆ ಹೆಚ್ಚಿನ ಉದ್ಯೋಗಾವಕಾಶ, ತರಬೇತಿ ಮತ್ತು ಸಬಲೀಕರಣ, ಸಾಮರ್ಥ್ಯ ವೃದ್ಧಿಸುವ ಗುರಿಯೊಂದಿಗೆ ಬಿಹಾರ ಯುವ ಆಯೋಗ ಸ್ಥಾಪಿಸಲು ನಿರ್ಧರಿಸಲಾಗಿದೆ. ಇದಕ್ಕೆ ಸಂಪುಟ ಇಂದು ಒಪ್ಪಿಗೆ ನೀಡಿದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಆಯೋಗವು ಅಧ್ಯಕ್ಷರು, ಇಬ್ಬರು ಉಪಾಧ್ಯಕ್ಷರು ಮತ್ತು ಏಳು ಸದಸ್ಯರನ್ನು ಒಳಗೊಂಡಿರುತ್ತದೆ. ಎಲ್ಲರೂ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರುತ್ತಾರೆ. ಇದು ಮದ್ಯಪಾನ ಮತ್ತು ಮಾದಕ ವ್ಯಸನದಂತಹ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಈ ಉಪಕ್ರಮವನ್ನು ಬಿಹಾರದ ಭವಿಷ್ಯದಲ್ಲಿ ದೀರ್ಘಾವಧಿಯ ಹೂಡಿಕೆ ಎಂದು ಸರ್ಕಾರ ಕರೆದಿದ್ದು, ರಾಜ್ಯದ ಯುವಕರನ್ನು ಸ್ವಾವಲಂಬಿ, ಕೌಶಲ್ಯ ಮತ್ತು ಉದ್ಯೋಗಕ್ಕೆ ಸಜ್ಜುಗೊಳಿಸುವ ಗುರಿಯಾಗಿದೆ ಎಂದು ತಿಳಿಸಿದೆ.
Advertisement