
ಪಾಟ್ನಾ: ಬಿಹಾರದಲ್ಲಿ ಆಡಳಿತಾರೂಢ ಎನ್‌ಡಿಎ ಸರ್ಕಾರ ತೊಲಗುವ ಹಾದಿಯಲ್ಲಿದ್ದು, ಮಹಾಘಟ್ ಬಂಧನ್ ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನರೇಂದ್ರ ಮೋದಿ ಸರ್ಕಾರ ತಂದಿರುವ ವಕ್ಫ್ ಕಾಯ್ದೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ ಎಂದು ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಭಾನುವಾರ ಹೇಳಿದ್ದಾರೆ.
ಇಲ್ಲಿನ ಐತಿಹಾಸಿಕ ಗಾಂಧಿ ಮೈದಾನದಲ್ಲಿ ನಡೆದ 'ವಕ್ಫ್ ಉಳಿಸಿ, ಸಂವಿಧಾನ ಉಳಿಸಿ' ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ತೇಜಸ್ವಿ ಯಾದವ್, ಆರ್‌ಜೆಡಿ ಈ ಕಾನೂನನ್ನು ವಿರೋಧಿಸುತ್ತದೆ ಎಂದು ನಮ್ಮ ರಾಷ್ಟ್ರೀಯ ಅಧ್ಯಕ್ಷ ಲಾಲು ಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಸಂಸತ್ತಿನ ಉಭಯ ಸದನಗಳಲ್ಲಿ ನಮ್ಮ ಸಂಸದರು ಇದನ್ನು ವಿರೋಧಿಸಿದ್ದು, ಕಾಯ್ದೆ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದೇವೆ ಎಂದು ತಿಳಿಸಿದರು.
ಎನ್‌ಡಿಎ ಸರ್ಕಾರ ತೊಲಗುವ ಹಾದಿಯಲ್ಲಿದೆ ಎಂಬುದನ್ನು ನೆನಪಿಟ್ಟುಕೊಳ್ಳಲು ರಾಜ್ಯದ ಮುಸ್ಲಿಂ ಸಹೋದರರಿಗೆ ಹೇಳುತ್ತೇನೆ. ನವೆಂಬರ್‌ನಲ್ಲಿ ರಾಜ್ಯದಲ್ಲಿ ಹೊಸ ಬಡವರ ಪರ ಸರ್ಕಾರವನ್ನು ಸ್ಥಾಪಿಸಲಾಗುವುದು. ಅದು ವಕ್ಫ್ ಕಾಯ್ದೆಯನ್ನು ಕಸದ ಬುಟ್ಟಿಗೆ ಹಾಕಲಿದೆ ಎಂದು ಹೇಳಿದರು.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಮತ್ತು ರಾಜ್ಯದಲ್ಲಿ ಅಧಿಕಾರ ಹಂಚಿಕೊಂಡಿರುವ ಬಿಜೆಪಿಗೆ ಸ್ವಾತಂತ್ರ್ಯ ಸಿಕ್ಕಿದ್ದು ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತರ ತ್ಯಾಗ ಬಲಿದಾನದಿಂದಲೇ ಎಂಬುದನ್ನು ನೆನಪಿಸಿಕೊಳ್ಳಬೇಕು. ದೇಶ ನನ್ನ ತಂದೆಯ ಆಸ್ತಿ ಎಂಬಂತೆ ಯಾರೂ ನಡೆದುಕೊಳ್ಳಬಾರದು ಎಂದು ವಾಗ್ದಾಳಿ ನಡೆಸಿದರು.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಡೆಸುವ ಮೂಲಕ ಬಿಜೆಪಿಗೆ ನೆರವಾಗುವ ಚುನಾವಣಾ ಆಯೋಗದ ಪ್ರಯತ್ನದ ವಿರುದ್ಧ ಜಾಗರೂಕರಾಗಿರಿ. ಅದರ ವಿರುದ್ಧ ನಾವು ಹೋರಾಡುತ್ತೇವೆ. ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಯಾವುದೇ ಪಿತೂರಿ ಯತ್ನವನ್ನು ವಿಫಲಗೊಳಿಸಬೇಕು ಎಂದು ಯಾದವ್ ರ‍್ಯಾಲಿಯಲ್ಲಿ ಪಾಲ್ಗೊಂಡ ಜನರಿಗೆ ಸೂಚಿಸಿದರು.
Advertisement