
ಲಖನೌ: ಮಹಿಳಾ ಉದ್ಯೋಗಿಯ ಮೇಲೆ ಅತ್ಯಾಚಾರ ಮಾಡಿ ವಿಡಿಯೋ ಮಾಡಿಕೊಂಡು ಇಸ್ಲಾಂಗೆ ಮತಾಂತರವಾಗದಿದ್ದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಹಿಂದೂ ಮಹಿಳೆಗೆ ಬೆದರಿಕೆ ಹಾಕಿದ್ದ ಆರೋಪದ ಮೇರೆಗೆ ಲುಲು ಮಾಲ್ (Lulu Mall) ಸೂಪರ್ ವೈಸರ್ ಫರಾಜ್ (Faraz) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉತ್ತರ ಪ್ರದೇಶದ ಲಕ್ನೋದ ಲುಲು ಮಾಲ್‌ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಹಿಂದೂ ಮಹಿಳಾ ಉದ್ಯೋಗಿಯೊಬ್ಬರು ತಮ್ಮ ಮ್ಯಾನೇಜರ್ ಫರ್ಹಾಜ್ ವಿರುದ್ಧ ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್ ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ.
ಮಾಲ್ ನಲ್ಲಿ ಸೂಪರ್ ವೈಸರ್ ಆಗಿದ್ದ ಫರ್ಹಾಜ್ ಮಾಲ್ ಕೆಲಸ ಮಾಡುತ್ತಿದ್ದ ಹಿಂದೂ ಮಹಿಳೆಗೆ ಬೆದರಿಕೆ ಹಾಕಿ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ.
ಮಾದಕವಸ್ತು ನೀಡಿ ಅತ್ಯಾಚಾರ, ವಿಡಿಯೋ ರೆಕಾರ್ಡ್
ಇನ್ನು ಸಂತ್ರಸ್ಥೆಯ ದೂರಿನಲ್ಲಿರುವಂತೆ ಆರೋಪಿ ಫರ್ಹಾಜ್ ತನಗೆ ಮಾದಕ ವಸ್ತು ಮಿಶ್ರಿತ ತಂಪು ಪಾನಿಯ ನೀಡಿದ್ದ. ಅದನ್ನು ಕುಡಿದ ಬಳಿಕ ನಾನು ಪ್ರಜ್ಞಾಹೀನಳಾಗಿದ್ದೆ. ಈ ವೇಳೆ ಆತ ನನ್ನ ಮೇಲೆ ಅತ್ಯಾಚಾರ ವೆಸಗಿದ್ದ. ಮಾತ್ರವಲ್ಲದೇ ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ. ಬಳಿಕ ಆ ವಿಡಿಯೋವನ್ನು ತೋರಿಸಿ ನನಗೆ ಆಗಾಗ ಬೆದರಿಕೆ ಹಾಕಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ.
ಈ ವೇಳೆ ನನ್ನ ಮೈಮೇಲೆ ಸಿಗರೇಟ್ ನಿಂದ ಸುಟ್ಟು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಅಲ್ಲದೆ ವಿಡಿಯೋ ಅಪ್ಲೋಡ್ ಮಾಡುವುದಾಗಿ ಹೇಳಿ ಆಗಾಗ ನನ್ನಿಂದ ಹಣ ಮತ್ತು ಒಡವೆಗಳನ್ನು ಸುಲಿಗೆ ಮಾಡುತ್ತಿದ್ದ. ಇದರ ನಡುವೆಯೇ ಫರ್ಹಾಜ್ ಆಕೆಯ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಈ ವಿಚಾರ ಬಹಿರಂಗ ಪಡಿಸಿದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕುತ್ತಿದ್ದ ಎಂದು ಆರೋಪಿಸಿದ್ದಾರೆ.
'ಕೆಲಸ ಬೇಕು ಅಂದ್ರೆ ಇಸ್ಲಾಂಗೆ ಮತಾಂತರ ಆಗು'
ಇನ್ನು ಲುಲು ಮಾಲ್ ನಲ್ಲಿ ಕೆಲಸದಲ್ಲಿ ಮುಂದುವರೆಯಲು ನೀನು ಇಸ್ಲಾಂಗೆ ಮತಾಂತರವಾಗಬೇಕು. ಇಲ್ಲದಿದ್ದಲ್ಲಿ ಕೆಲಸದಿಂದ ಕಿತ್ತೊಗೆಯುತ್ತೇನೆ. ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದ. ಮಾಲ್‌ನಲ್ಲಿ ತನ್ನ ಕೆಲಸವನ್ನು ಉಳಿಸಿಕೊಳ್ಳಲು ಅವಳು ಇಸ್ಲಾಂ ಅನ್ನು ಪಾಲಿಸಬೇಕು ಎಂದು ಬೆದರಿಸುತ್ತಿದ್ದ. ಅಲ್ಲದೆ ಹಿಂದೂ ಧರ್ಮ ಮತ್ತು ಅದರ ದೇವತೆಗಳನ್ನು ಪದೇ ಪದೇ ಅವಹೇಳನ ಮಾಡುತ್ತಿದ್ದ ಎಂದು ದೂರಿನಲ್ಲಿ ಸಂತ್ರಸ್ಥ ಮಹಿಳೆ ಅಳಲು ತೋಡಿಕೊಂಡಿದ್ದಾರೆ.
ಫೊರೆನ್ಸಿಕ್ ವಿಚಾರಣೆ
ಇನ್ನು ಮತಾಂತರ ಆರೋಪದ ಹಿನ್ನಲೆಯಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ಪ್ರದೇಶ ಪೊಲೀಸರು ಈ ಪ್ರಕರಣದಲ್ಲಿ ಫೊರೆನ್ಸಿಕ್ ವಿಚಾರಣೆಗೆ ಮುಂದಾಗಿದ್ದಾರೆ. ಆರಂಭಿಕ ತನಿಖೆಯಲ್ಲಿ ಅಪರಾಧಿಯು ಅನುಮಾನಾಸ್ಪದ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಮತಾಂತರ ಜಾಲಗಳೊಂದಿಗೆ ಸಂಪರ್ಕ ಹೊಂದಿರಬಹುದು ಎಂದು ತಿಳಿದುಬಂದಿದೆ.
ಪೊಲೀಸರು ಪ್ರಸ್ತುತ ವಿಶಾಲ ಜಾಲದಲ್ಲಿ ಭಾಗಿಯಾಗಿದ್ದಾರೆಯೇ ಎಂದು ನಿರ್ಧರಿಸಲು ಸೈಬರ್ ಫೋರೆನ್ಸಿಕ್ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಹೆಚ್ಚುವರಿಯಾಗಿ, ಪೊಲೀಸರು ಮಾಲ್‌ನ ಇತರ ಉದ್ಯೋಗಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಅಪರಾಧಿಯ ವಿರುದ್ಧ ಅತ್ಯಾಚಾರ, ಕೊಲೆ ಬೆದರಿಕೆ ಮತ್ತು ಬಲವಂತದ ಮತಾಂತರ ಪ್ರಯತ್ನ ಸೇರಿದಂತೆ ಹಲವು ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತರು (ಉತ್ತರ) ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಆರೋಪಿ ಫರ್ಹಾಜ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಬಂಧನದಲ್ಲಿಡಲಾಗಿದೆ. ಈ ಘಟನೆಯ ಬಗ್ಗೆ ಲುಲು ಮಾಲ್‌ನ ಆಡಳಿತ ಮಂಡಳಿಯಿಂದ ಇಲ್ಲಿಯವರೆಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
Advertisement