
ಕೋಲ್ಕತ್ತಾ: ಕೋಲ್ಕತಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM-Calcutta) ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ದೊರೆತಿದ್ದು, ವಿದ್ಯಾರ್ಥಿನಿ ಮೇಲಿನ ಅತ್ಯಾಚಾರವನ್ನು ಆಕೆಯ ತಂದೆ ಅಲ್ಲಗಳೆದಿದ್ದಾರೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಕಲ್ಕತ್ತಾ (ಐಐಎಂ-ಸಿ) ವಿದ್ಯಾರ್ಥಿನಿಯ ತಂದೆ ಅಂತಹದ್ದೇನೂ ನಡೆದಿಲ್ಲ.. ತಮ್ಮ ಮಗಳು ಪ್ರಜ್ಞೆ ತಪ್ಪಿ ಆಟೋದಿಂದ ಬಿದ್ದಿದ್ದಾಳೆ ಎಂದು ಸ್ಪಷ್ಟಪಡಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ತಂದೆ, 'ಶುಕ್ರವಾರ ರಾತ್ರಿ 9:34ಕ್ಕೆ ನನಗೆ ಕರೆ ಮಾಡಿ ತಮ್ಮ ಮಗಳು ಆಟೋದಿಂದ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದಾಳೆ. ಆಕೆಯನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಯ ನರವಿಜ್ಞಾನ ವಿಭಾಗಕ್ಕೆ ದಾಖಲಿಸಲಾಗಿತ್ತು. ಆಕೆಯನ್ನು ಪೊಲೀಸರು ರಕ್ಷಿಸಿ, ಕರೆದೊಯ್ದಿದ್ದಾರೆ ಎಂದು ಹೇಳಿದ್ದಾರೆ.
ಅತ್ಯಾಚಾರವಾಗಿಲ್ಲ..
ಬಳಿಕ ನಾನು ಆಸ್ಪತ್ರೆಗೆ ಹೋಗಿ ವಿಚಾರಿಸಿದೆ. ಈ ವೇಳೆ ಆಕೆ ತನ್ನ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಮಗಳು ಹೇಳಿದ್ದಾಳೆ. ಅಂತೆಯೇ ಈ ಪ್ರಕರಣದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯಾರೋ ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ. ಹೀಗಾಗಿ ನನ್ನ ಮಗಳ ವೈದ್ಯಕೀಯ ಪರೀಕ್ಷೆಯ ಸಮಯದಲ್ಲಿ ಪೊಲೀಸರು ಏನಾದರೂ ಹೇಳುವಂತೆ ಆಕೆಗೆ ಒತ್ತಾಯ ಮಾಡಿದರು. ಆದರೆ ನನ್ನ ಮಗಳು ಯಾವುದೇ ರೀತಿಯ ಹೇಳಿಕೆ ನೀಡಲಿಲ್ಲ ಎಂದು ಹೇಳಿದ್ದಾಳೆ ಎಂದರು.
"ನಾನು ನನ್ನ ಮಗಳೊಂದಿಗೆ ಮಾತನಾಡಿದ್ದೇನೆ. ಯಾರೂ ಅವಳನ್ನು ಹಿಂಸಿಸಿಲ್ಲ ಅಥವಾ ಅವಳೊಂದಿಗೆ ಅನುಚಿತವಾಗಿ ವರ್ತಿಸಿಲ್ಲ ಎಂದು ಅವಳು ಹೇಳಿದಳು. ನಾನು ನನ್ನ ಮಗಳನ್ನು ಮರಳಿ ಮನೆಗೆ ಕರೆದುಕೊಂಡು ಬಂದಿದ್ದೇನೆ. ಅವಳು ಸಾಮಾನ್ಯಳಾಗಿದ್ದಾಳೆ. ಬಂಧಿಸಲ್ಪಟ್ಟ ವ್ಯಕ್ತಿಗೂ ಆಕೆಗೂ ಯಾವುದೇ ಸಂಬಂಧವಿಲ್ಲ... ನಾನು ಅವಳೊಂದಿಗೆ ಹೆಚ್ಚು ಸಮಯ ಮಾತನಾಡಲು ಸಾಧ್ಯವಾಗಲಿಲ್ಲ. ಅವಳು ನಿದ್ರಿಸುತ್ತಿದ್ದಾಳೆ. ಅವಳು ಎಚ್ಚರವಾದ ನಂತರ ನಾನು ಅವಳೊಂದಿಗೆ ಮಾತನಾಡುತ್ತೇನೆ ಎಂದರು.
ಬಲವಂತದ ಹೇಳಿಕೆಗೆ ಒತ್ತಾಯ
ಇದೇ ವೇಳೆ ದೂರಿನ ಭಾಗವಾಗಿ ತನ್ನ ಮಗಳನ್ನು ಪೊಲೀಸ್ ಠಾಣೆಯಲ್ಲಿ ಏನನ್ನಾದರೂ ಬರೆಯಲು ಕೇಳಲಾಗಿದೆ ಎಂದು ತಂದೆ ಒತ್ತಿ ಹೇಳಿದರು. ಪೊಲೀಸರ ಒತ್ತಾಯದ ಮೇರೆಗೆ ಆಕೆ ಹಾಗೆ ಮಾಡಿದಳು ಎಂದು ಹೇಳಿದರು. ಇದೇ ವೇಳೆ ಮಗಳು ಆಘಾತಕ್ಕೊಳಗಾಗಿದ್ದಾಳೆಯೇ ಎಂದು ವರದಿಗಾರ ಕೇಳಿದಾಗ, ಅವರು "ಇಲ್ಲ, ಅವಳು ಸಂಪೂರ್ಣವಾಗಿ ಫಿಟ್ ಆಗಿದ್ದಾಳೆ" ಎಂದು ಉತ್ತರಿಸಿದರು.
ಏನಿದು ಘಟನೆ?
ಐಐಎಂ-ಸಿ (ಕೋಲ್ಕತಾ)ಯ ಬಾಲಕರ ಹಾಸ್ಟೆಲ್‌ನೊಳಗೆ ಸಹ ವಿದ್ಯಾರ್ಥಿಯೊಬ್ಬರು ವಿದ್ಯಾರ್ಥಿನಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಬಗ್ಗೆ ಸಂತ್ರಸ್ಥ ಯುವತಿ ದೂರು ಕೂಡ ದಾಖಲಿಸಿದ್ದು ಪೊಲೀಸರು ಎಫ್ಐಆರ್ ಹಾಕಿದ್ದಾರೆ. ಸಂತ್ರಸ್ಥ ಯುವತಿ ಎಫ್‌ಐಆರ್‌ನಲ್ಲಿ ಕೌನ್ಸೆಲಿಂಗ್ ಸೆಷನ್‌ಗಾಗಿ ಹಾಸ್ಟೆಲ್‌ಗೆ ಕರೆಸಲಾಗಿತ್ತು.
ಈ ವೇಳೆ ಹಾಸ್ಟೆಲ್‌ನಲ್ಲಿ ಡ್ರಗ್ಸ್ ಬೆರೆಸಿದ ಪಾನೀಯವನ್ನು ಸೇವಿಸಿದ ನಂತರ ಪ್ರಜ್ಞಾಹೀನಳಾದೆ. ಪ್ರಜ್ಞೆ ಮರಳಿದ ನಂತರ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ನನಗೆ ತಿಳಿಯಿತು ಎಂದು ತಿಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದರು.
ಅಲ್ಲದೆ ಈ ಪ್ರಕರಣ ಸಂಬಂಧ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದು, ಕೋರ್ಟ್ ಈತನಿಗೆ ಜುಲೈ 19 ರವರೆಗೆ ಪೊಲೀಸ್ ಕಸ್ಟಡಿ ವಿಧಿಸಿದೆ. ಆತನ ವಕೀಲರು ಆತನ ವಿರುದ್ಧ ಸುಳ್ಳು ಆರೋಪ ಹೊರಿಸಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
Advertisement