
ನವದೆಹಲಿ: ಈಶಾನ್ಯ ದೆಹಲಿಯ ವೆಲ್ಕಮ್ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಇಬ್ಬರು ಮೃತಪಟ್ಟಿದ್ದು, ಒಂದು ವರ್ಷದ ಮಗು ಸೇರಿದಂತೆ ಎಂಟು ಜನರು ಗಾಯಗೊಂಡಿದ್ದಾರೆ, ಇನ್ನೂ ಕೆಲವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಟ್ಟಡ ಕುಸಿತದಲ್ಲಿ ಗಾಯಗೊಂಡವರಲ್ಲಿ ಕಟ್ಟಡದಲ್ಲಿ ವಾಸಿಸುತ್ತಿದ್ದ ಒಂದು ಕುಟುಂಬದ 10 ಸದಸ್ಯರು ಮತ್ತು ಅದರ ಸಮೀಪದಲ್ಲಿದ್ದ ಕೆಲವರು ಸೇರಿದ್ದಾರೆ ಎಂದು ಅವರು ಹೇಳಿದರು.
ಎಂಟು ಜನರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ, ಇನ್ನೂ ಅವಶೇಷಗಳಲ್ಲಿ ಸಿಲುಕಿರಬಹುದಾದ ಇತರರನ್ನು ರಕ್ಷಿಸುವ ಪ್ರಯತ್ನಗಳು ಇನ್ನೂ ನಡೆಯುತ್ತಿವೆ.
ಶನಿವಾರ ಬೆಳಗ್ಗೆ 7.04 ರ ಸುಮಾರಿಗೆ, ವೆಲ್ಕಮ್‌ನ ಈದ್ಗಾ ಬಳಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿರುವ ಬಗ್ಗೆ ನಮಗೆ ವೆಲ್ಕಮ್ ಪೊಲೀಸ್ ಠಾಣೆಯಲ್ಲಿ ಮಾಹಿತಿ ಸಿಕ್ಕಿತು. ಪೊಲೀಸ್ ತಂಡ ಸ್ಥಳಕ್ಕೆ ತಲುಪಿದಾಗ, ಕಟ್ಟಡದ ಮೂರು ಅಂತಸ್ತುಗಳು ಕುಸಿದಿರುವುದು ಕಂಡುಬಂದಿದೆ. ಇಲ್ಲಿಯವರೆಗೆ, ಎಂಟು ಗಾಯಾಳುಗಳನ್ನು ರಕ್ಷಿಸಲಾಗಿದೆ - ಏಳು ಜನರನ್ನು ಜೆಪಿಸಿ ಆಸ್ಪತ್ರೆಗೆ ಮತ್ತು ಒಬ್ಬರನ್ನು ಚಿಕಿತ್ಸೆಗಾಗಿ ಜಿಟಿಬಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.
ಕಟ್ಟಡದ ಮಾಲೀಕ ಮತ್ಲೂಬ್ ತಮ್ಮ ಕುಟುಂಬ ಸದಸ್ಯರೊಂದಿಗೆ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ನೆಲ ಮಹಡಿ ಮತ್ತು ಮೊದಲ ಮಹಡಿಯಲ್ಲಿ ಯಾರೂ ವಾಸಿಸುತ್ತಿಲ್ಲ. ಎದುರಿನ ಕಟ್ಟಡಕ್ಕೂ ಹಾನಿಯಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಈಶಾನ್ಯ) ಸಂದೀಪ್ ಲಂಬಾ ಹೇಳಿದರು.
ಕಟ್ಟಡ ಕುಸಿದಾಗ ಅಲ್ಲಿದ್ದ ಪರ್ವೇಜ್ (32ವ), ಅವರ ಪತ್ನಿ ಸಿಜಾ (21ವ), ಅವರ ಮಗ ಅಹ್ಮದ್ (14 ತಿಂಗಳು), ಮತ್ತು ಅವರ ಸಹೋದರ ನವೇದ್ (19ವ) ಅವರನ್ನು ರಕ್ಷಿಸಲಾಗಿದೆ.
ಸ್ಥಳೀಯರು 10 ಜನರ ಕುಟುಂಬ ಕಟ್ಟಡದಲ್ಲಿ ವಾಸಿಸುತ್ತಿತ್ತು ಎಂದು ಹೇಳುತ್ತಾರೆ. ಬೆಳಗ್ಗೆ 7 ಗಂಟೆ ಸುಮಾರಿಗೆ, ನಾನು ನನ್ನ ಮನೆಯಲ್ಲಿದ್ದಾಗ ದೊಡ್ಡ ಶಬ್ದ ಕೇಳಿಬಂತು, ಎಲ್ಲೆಡೆ ಧೂಳು ತುಂಬಿತ್ತು. ನಾನು ಕೆಳಗೆ ಬಂದಾಗ, ನಮ್ಮ ನೆರೆಹೊರೆಯವರ ಮನೆ ಕುಸಿದಿರುವುದನ್ನು ನೋಡಿದೆ ಎಂದು ಸ್ಥಳೀಯರಾದ ಅಸ್ಮಾ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಎಷ್ಟು ಜನರು ಸಿಲುಕಿಕೊಂಡಿದ್ದಾರೆಂದು ನಮಗೆ ತಿಳಿದಿಲ್ಲ ಆದರೆ 10 ಜನರ ಕುಟುಂಬ ಅಲ್ಲಿ ವಾಸಿಸುತ್ತಿದೆ ಅವರಲ್ಲಿ ಮೂವರನ್ನು ರಕ್ಷಿಸಲಾಗಿದೆ, ಅಗ್ನಿಶಾಮಕ ದಳದ ಸಹಾಯದಿಂದ, ಮೂವರನ್ನು ರಕ್ಷಿಸಲಾಯಿತು.
ದೆಹಲಿ ಅಗ್ನಿಶಾಮಕ ಸೇವೆಯ ಮುಖ್ಯಸ್ಥ ಅತುಲ್ ಗರ್ಗ್, ಸೀಲಾಂಪುರದ ಇದ್ಗಾ ರಸ್ತೆಯ ಬಳಿಯ ಜಂತ ಕಾಲೋನಿಯ ಗಾಲಿ ಸಂಖ್ಯೆ 5 ರಲ್ಲಿ ಕಟ್ಟಡವೊಂದು ಕುಸಿದಿದೆ ಎಂದು ತಿಳಿಸಿದ್ದಾರೆ.
ಒಟ್ಟು ಏಳು ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿವೆ. ಮೂವರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ. ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಗರ್ಗ್ ಹೇಳಿದರು.
ಕಟ್ಟಡದ ಹೊರಗೆ ಇದ್ದ ಗೋವಿಂದ್ (60ವ) ಮತ್ತು ಅವರ ಸಹೋದರ ರವಿ ಕಶ್ಯಪ್ (27ವ) ಮತ್ತು ಅವರ ಪತ್ನಿಯರಾದ ದೀಪಾ (56ವ) ಮತ್ತು ಜ್ಯೋತಿ (27ವ) ಕೂಡ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement