
ಹೈದರಾಬಾದ್: ತಿನ್ಮಾರ್ ಮಲ್ಲಣ್ಣ ಎಂದೇ ಹೆಸರಾದ ಎಂಎಲ್‌ಸಿ ಚಿಂತಪಾಂಡು ನವೀನ್ ಕುಮಾರ್ ಅವರ ಕಚೇರಿಯಲ್ಲಿ ಭಾನುವಾರ ಕೆಲಕಾಲ ಉದ್ವಿಗ್ನತೆ ಉಂಟಾಯಿತು. ಪ್ರತಿಭಟನಾಕಾರರ ಗುಂಪನ್ನು ಚದುರಿಸಲು ಅವರ ಗನ್ ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಲ್ಲಣ್ಣ ಅವರು ಇತ್ತೀಚಿಗೆ ಬಿಆರ್ ಎಸ್ ನಾಯಕಿ ಕವಿತಾ ವಿರುದ್ಧ ನೀಡಿದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ತೆಲಂಗಾಣ ಜಾಗೃತಿ ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತರು, ಮೆಡಿಪಲ್ಲಿಯಲ್ಲಿರುವ ಮಲ್ಲಣ್ಣ ಅವರ ಕಚೇರಿ ಮೇಲೆ ದಾಳಿ ಮಾಡಿದ್ದು ಧ್ವಂಸಗೊಳಿಸಿದ್ದಾರೆ. ಈ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿತು ಎನ್ನಲಾಗಿದೆ. ಈ ವೇಳೆ ಮಲ್ಲಣ್ಣ ಅವರ ಗನ್ ಮ್ಯಾನ್ ಪ್ರತಿಭಟನಾಕಾರರನ್ನು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿದಾರೆ.
ಈ ವೇಳೆ ತೆಲಂಗಾಣ ಜಾಗೃತಿ ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತ ಸಾಯಿ ಎಂಬುವರು ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು MLC ಕವಿತಾ ಅವರ ಕಚೇರಿ ಹೇಳಿಕೊಂಡಿದೆ.
ಕಾಂಗ್ರೆಸ್‌ನ ಮಾಜಿ ನಾಯಕ ಮಲ್ಲಣ್ಣ ಅವರು ಇತ್ತೀಚಿಗೆ ಕವಿತಾ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು. "ಒಂದು ತಟ್ಟೆಯ ಮೇಲೆ ಒಪ್ಪಂದ ಆಗಿದೆಯೇ? ಹಾಸಿಗೆಯ ಮೇಲೆ ಒಪ್ಪಂದ ಆಗಿದೆಯೇ? ಹಿಂದುಳಿದ ವರ್ಗಗಳಿಗೆ ಮೀಸಲಾದ ಸವಲತ್ತು ದೊರೆಯಲು ನೀವು ಏನು ಮಾಡಬೇಕು? ನೀವು ಸಹ ಹಿಂದುಳಿದ ವರ್ಗವೇ? ಎಂದು ಪ್ರಶ್ನಿಸಿದ್ದರು. ಹಾಸಿಗೆ ಎಂಬ ಪದ ಬಳಕೆ ಸಾಕಷ್ಟು ಟೀಕೆಗೆ ಗುರಿಯಾಗಿದೆ.
ಇದು ಮಲ್ಲಣ್ಣ ಅವರ ಕಚೇರಿಯ ಹೊರಗೆ ಭಾನುವಾರ ನಾಟಕೀಯ ಸನ್ನಿವೇಶಗಳಿಗೆ ಕಾರಣವಾಯಿತು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದು, ಅಧಿಕೃತ ದೂರುಗಳು ದಾಖಲಾದ ನಂತರ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
Advertisement