
ನವದೆಹಲಿ: ಇಲ್ಲಿನ ಆರ್‌ಕೆ ಪುರಂ ಪ್ರದೇಶದಲ್ಲಿ ಕಾರು ನಿಲ್ಲಿಸುವ ವಿಚಾರಕ್ಕೆ ನಡೆದ ಜಗಳ ತೀವ್ರಗೊಂಡಿದ್ದು, ವ್ಯಕ್ತಿಯೊಬ್ಬ ಕಾರಿನೊಳಗೆ ಇದ್ದ ಮತ್ತೊಬ್ಬ ವ್ಯಕ್ತಿ ಮೇಲೆ ಪೆಟ್ರೋಲ್ ಸುರಿದ ಪರಿಣಾಮ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಸೆಕ್ಟರ್ -8 ಮಾರುಕಟ್ಟೆಯಲ್ಲಿ ಭಾನುವಾರ ರಾತ್ರಿ 9.30 ರ ಸುಮಾರಿಗೆ ನಡೆದ ಈ ಘಟನೆಯಲ್ಲಿ ಪೌರ ಕಾರ್ಮಿಕ ರಾಹುಲ್ ಚೌಹಾಣ್ (40) ಅವರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ ಎಂದು ಅವರು ತಿಳಿಸಿದ್ದಾರೆ.
ಮೆಕ್ಯಾನಿಕ್ ಗಯಾ ಪ್ರಸಾದ್ (42) ಅಲಿಯಾಸ್ ಕಾಲು ಎಂಬಾತ ಕಾರಿನೊಳಗೆ ಸಂಬಂಧಿಕರೊಂದಿಗೆ ಕುಳಿತಿದ್ದ ಚೌಹಾಣ್ ಅವರನ್ನು ತನ್ನ ಅಂಗಡಿಯ ಬಳಿಯಿಂದ ಕಾರನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಕೇಳಿದ್ದಾನೆ. ಬಳಿಕ ಇಬ್ಬರ ನಡುವೆ ಇದೇ ವಿಚಾರಕ್ಕೆ ತೀವ್ರ ವಾಗ್ವಾದ ನಡೆದಿದೆ. ಬಳಿಕ ಗಯಾ ಪ್ರಸಾದ್ ಕೋಪದಿಂದ ಚೌಹಾಣ್ ಮೇಲೆ ಪೆಟ್ರೋಲ್ ಸುರಿದಿದ್ದಾನೆ. ಇದರಿಂದಾಗಿ ಕಾರಿನೊಳಗೆ ಬೆಂಕಿ ಹೊತ್ತಿಕೊಂಡಿದೆ.
ಸಿಗರೇಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದ್ದು, ಪ್ರಸಾದ್ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
'ಮೆಕ್ಯಾನಿಕ್ ಒಬ್ಬ ವ್ಯಕ್ತಿಗೆ ಬೆಂಕಿ ಹಚ್ಚಿದ ಬಗ್ಗೆ ಆರ್‌ಕೆ ಪುರಂ ಪೊಲೀಸ್ ಠಾಣೆಗೆ ಪಿಸಿಆರ್ ಕರೆ ಬಂದಿದೆ. ಬಳಿಕ ಪೊಲೀಸರ ತಂಡ ಸ್ಥಳಕ್ಕೆ ತೆರಳಿ ನೋಡಿದಾಗ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಸಂತ್ರಸ್ತನನ್ನು ತಕ್ಷಣವೇ ಪಿಸಿಆರ್ ವ್ಯಾನ್ ಮೂಲಕ ಟ್ರಾಮಾ ಸೆಂಟರ್‌ಗೆ ಸ್ಥಳಾಂತರಿಸಲಾಯಿತು' ಎಂದು ಉಪ ಪೊಲೀಸ್ ಆಯುಕ್ತ (ನೈಋತ್ಯ) ಅಮಿತ್ ಗೋಯೆಲ್ ತಿಳಿಸಿದ್ದಾರೆ.
ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ನಲ್ಲಿ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ರಾಹುಲ್ ಚೌಹಾಣ್, ತನ್ನ ಸೋದರಸಂಬಂಧಿ ಮತ್ತು ಇತರ ಇಬ್ಬರೊಂದಿಗೆ ಕಾರಿನೊಳಗೆ ಕುಳಿತಿದ್ದಾಗ ವಾಗ್ವಾದ ನಡೆದಿದೆ ಎಂದು ಡಿಸಿಪಿ ತಮ್ಮ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗಯಾ ಪ್ರಸಾದ್ ಅವರ ಅಂಗಡಿಯ ಪಕ್ಕದಲ್ಲಿ ತಮ್ಮ ವಾಹನ ನಿಂತಿತ್ತು. ಪ್ರಸಾದ್ ಕಾರನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸಲು ಕೇಳಿದ್ದು ಜಗಳಕ್ಕೆ ಕಾರಣವಾಯಿತು. ಅವರು ನಿರಾಕರಿಸಿದಾಗ, ಮೆಕ್ಯಾನಿಕ್ ಚೌಹಾಣ್ ಮೇಲೆ ಪೆಟ್ರೋಲ್ ಸುರಿದಿದ್ದಾನೆ ಎಂದು ಅಧಿಕಾರಿ ಹೇಳಿದರು.
'ಪ್ರಾಥಮಿಕ ತನಿಖೆಯ ಪ್ರಕಾರ, ಸಿಗರೇಟ್‌ನಿಂದಾಗಿ ಕಾರಿಗೆ ಬೆಂಕಿ ಹೊತ್ತಿಕೊಂಡಿರಬಹುದು. ಇದರ ಪರಿಣಾಮವಾಗಿ ಸಂತ್ರಸ್ತನ ಮುಖ ಮತ್ತು ಎದೆಗೆ ಸುಟ್ಟ ಗಾಯಗಳಾಗಿದ್ದು, ಕಾರಿಗೂ ಬೆಂಕಿಯಿಂದ ಹಾನಿಯಾಗಿದೆ' ಎಂದು ಅಧಿಕಾರಿ ಹೇಳಿದರು.
ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ-ಕಾನೂನು ಪ್ರಕರಣ (MLC) ವರದಿಯಲ್ಲಿ ವೈದ್ಯರು ಅವರಿಗೆ ಶೇ 20ರಷ್ಟು ಸುಟ್ಟ ಗಾಯಗಳಾಗಿವೆ. ಅವರ ಸ್ಥಿತಿ ಸದ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ.
ಚೌಹಾಣ್ ಅವರ ಹೇಳಿಕೆಯ ಆಧಾರದ ಮೇಲೆ, ಪೊಲೀಸರು ಬಿಎನ್‌ಎಸ್‌ನ ಸೆಕ್ಷನ್ 109(1) (ಕೊಲೆ ಯತ್ನ) ಅಡಿಯಲ್ಲಿ ಆರೋಪಿಗಳ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement