ಕೇರಳ ನರ್ಸ್ ಗೆ ಗಲ್ಲು ಶಿಕ್ಷೆ: 'ಭಾರತ ಹೆಚ್ಚೇನೂ ಮಾಡಲು ಸಾಧ್ಯವಿಲ್ಲ'; ಸುಪ್ರೀಂ ಕೋರ್ಟ್‌ಗೆ ಕೇಂದ್ರ ಪ್ರತಿಕ್ರಿಯೆ

ಇದೇ ಜುಲೈ 16ರಂದು ಕೊಲೆ ಪ್ರಕರಣದಲ್ಲಿ ನಿಮಿಷಾ ಪ್ರಿಯಾ ಅವರನ್ನು ಗಲ್ಲಿಗೇರಿಸಲಾಗುತ್ತಿದೆ.
Kerala nurse Nimisha Priya
ಸುಪ್ರೀಂ ಕೋರ್ಟ್ - ನಿಮಿಷಾ ಪ್ರಿಯಾ
Updated on

ನವದೆಹಲಿ: ಯೆಮೆನ್‌ನಲ್ಲಿ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಮರಣದಂಡನೆಯಿಂದ ರಕ್ಷಿಸಲು ಖಾಸಗಿ ಮಾರ್ಗಗಳ ಮೂಲಕ ಪ್ರಯತ್ನಗಳನ್ನು ಮಾಡುತ್ತಿರುವಾಗ, ಆ ದೇಶದ ರಾಜತಾಂತ್ರಿಕ ಸೂಕ್ಷ್ಮತೆಯಿಂದಾಗಿ ಭಾರತ "ಹೆಚ್ಚೇನೂ" ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

"ಯೆಮೆನ್‌ನ ಸೂಕ್ಷ್ಮತೆಯನ್ನು ಗಮನಿಸಿದರೆ ಭಾರತ ಸರ್ಕಾರವು ಹೆಚ್ಚಿನದನ್ನು ಮಾಡಲು ಸಾಧ್ಯವಿಲ್ಲ. ಅದನ್ನು ರಾಜತಾಂತ್ರಿಕವಾಗಿ ಗುರುತಿಸಲಾಗಿಲ್ಲ" ಎಂದು ಕೇಂದ್ರ ಸರ್ಕಾರದ ಪರವಾಗಿ ವಿಚಾರಣೆಗೆ ಹಾಜರಾದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠಕ್ಕೆ ತಿಳಿಸಿದರು.

ಇದೇ ಜುಲೈ 16ರಂದು ಕೊಲೆ ಪ್ರಕರಣದಲ್ಲಿ ನಿಮಿಷಾ ಪ್ರಿಯಾ ಅವರನ್ನು ಗಲ್ಲಿಗೇರಿಸಲಾಗುತ್ತಿದೆ. ಹೀಗಾಗಿ ಅವರ ಪರ ವಕೀಲ ಸುಭಾಷ್ ಚಂದ್ರನ್ ಕೆ.ಆರ್ ಅವರು ರಾಜತಾಂತ್ರಿಕ ಮಾರ್ಗಗಳನ್ನು ಆದಷ್ಟು ಬೇಗ ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದು, ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರು ಇಂದು ಪ್ರಕರಣದ ವಿಚಾರಣೆ ನಡೆಸಿದರು.

ಈ ವೇಳೆ ಅಧಿಕೃತ ರಾಜತಾಂತ್ರಿಕ ಸಂಬಂಧಗಳ ಅನುಪಸ್ಥಿತಿಯಲ್ಲಿ ಸರ್ಕಾರವು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆಯೇ? ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು. "ನಾವು ಸಾರ್ವಜನಿಕವಾಗಿ ಮಾತನಾಡುವ ಮೂಲಕ ಪರಿಸ್ಥಿತಿಯನ್ನು ಸಂಕೀರ್ಣಗೊಳಿಸಲು ಬಯಸಲಿಲ್ಲ. ನಾವು ಖಾಸಗಿಯಾಗಿ ಪ್ರಯತ್ನಿಸುತ್ತಿದ್ದೇವೆ" ಎಂದು ಎಜಿ ಹೇಳಿದರು.

Kerala nurse Nimisha Priya
ಯೆಮೆನ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳ ನರ್ಸ್‌ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಕೇಂದ್ರ ಸರ್ಕಾರವು ಯೆಮನ್‌ನ ಪ್ರಭಾವಿ ಶೇಖ್‌ ಅವರನ್ನು ಸಂಪರ್ಕಿಸಿ ಗಲ್ಲು ಶಿಕ್ಷೆ ತಡೆಯುವಂತೆ ಸಾರ್ವಜನಿಕ ಅಭಿಯೋಜಕರನ್ನು ಕೋರಿದೆ ಎಂದು ವೆಂಕಟರಮಣಿ ಹೇಳಿದರು. ಆದರೆ ಆ ಪ್ರಯತ್ನಗಳು ಫಲ ನೀಡಿಲ್ಲ. "ನಮಗೆ ಮರಣದಂಡನೆ ಸ್ಥಗಿತಗೊಳಿಸಲಾಗುವುದು ಎಂದು ಅನೌಪಚಾರಿಕ ಸಂವಹನ ಸಿಕ್ಕಿದೆ. ಆದರೆ ಅದು ಕಾರ್ಯರೂಪಕ್ಕೆ ಬರುತ್ತದೆಯೇ ಎಂದು ನಮಗೆ ಖಚಿತವಾಗಿ ತಿಳಿದಿಲ್ಲ" ಎಂದು ಅವರು ಹೇಳಿದರು.

SNPIAC ಪರವಾಗಿ ಹಾಜರಾದ ಅರ್ಜಿದಾರರ ವಕೀಲರು, "ಆಕೆಯ ಜೀವವನ್ನು ಉಳಿಸಲು ನಾವು ಹೆಚ್ಚಿನ ಬ್ಲಡ್ ಮನಿ (ಮೃತರ ಕುಟುಂಬಕ್ಕೆ ಅವರು ಕೇಳಿದಷ್ಟು ಆರ್ಥಿಕ ಸಹಾಯ ನೀಡುವುದು) ಪಾವತಿಸಲು ಸಹ ಸಿದ್ಧರಿದ್ದೇವೆ" ಎಂದು ಹೇಳಿದರು.

ನಿಮಿಷಾ ಪ್ರಿಯಾ ಅವರ ವಕೀಲರು ಮತ್ತು ಅಟಾರ್ನಿ ಜನರಲ್ ಇಬ್ಬರಿಂದಲೂ ವಾದಗಳನ್ನು ಕೇಳಿದ ನಂತರ ಸುಪ್ರೀಂ ಕೋರ್ಟ್ ಜುಲೈ 18ರ ಶುಕ್ರವಾರದಂದು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿತು. “ಪ್ರಕರಣದ ಸ್ಥಿತಿಯ ಬಗ್ಗೆ ಎರಡೂ ಕಡೆಯುವರು ಮುಂದಿನ ದಿನಾಂಕದಂದು ನ್ಯಾಯಾಲಯಕ್ಕೆ ತಿಳಿಸಬಹುದು” ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com