
ಹೈದರಾಬಾದ್: ತೆಲಂಗಾಣದ ಹೈದರಾಬಾದ್‌ನಲ್ಲಿ ಮಂಗಳವಾರ ಬೆಳಗ್ಗೆ ಹಾಡಹಗಲೇ ಸಿಪಿಐ ಮುಖಂಡರೊಬ್ಬರನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ನಗರದ ಮಲಕಪೇಟೆಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಕೆ ಚಂದು ನಾಯ್ಕ (47) ಎಂದು ಗುರುತಿಸಲಾಗಿದೆ.
ನಾಯಕ್ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಪರಿಷತ್ ಸದಸ್ಯರಾಗಿದ್ದರು. ಅವರು ಪಾರ್ಕ್ ವೊಂದರ ಬಳಿ ಬೆಳಗಿನ ವಾಕ್ ಮಾಡುತ್ತಿದ್ದಾಗ ಶಸ್ತ್ರಸಜ್ಜಿತ ದಾಳಿಕೋರರು ದಾಳಿ ನಡೆಸಿದ್ದಾರೆ. ಹಲವು ಬಾರಿ ಗುಂಡಿನ ದಾಳಿ ನಡೆಸಿದ್ದರಿಂದ ಸಿಪಿಐ ಮುಖಂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಮೂರ್ನಾಲ್ಕು ಮಂದಿ ದುಷ್ಕರ್ಮಿಗಳು ಕಾರಿನಲ್ಲಿ ಬಂದಿದ್ದರು ಎನ್ನಲಾಗಿದೆ. ಪರಾರಿಯಾಗದಂತೆ ಸಂತ್ರಸ್ಥನ ಕಣ್ಣಿಗೆ ಕಾರದ ಪುಡಿ ಎರಚಿದ್ದಾರೆ ಎಂದು ಸಿಯಾಸತ್ ಡೈಲಿ ವರದಿ ಮಾಡಿದೆ.
ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ನಾಯ್ಕ್‌ಗೆ ರಾಜೇಶ್ ಎಂಬ ವ್ಯಕ್ತಿಯೊಂದಿಗೆ ದೀರ್ಘಕಾಲದ ದ್ವೇಷವಿತ್ತು ಎಂದು ಅವರ ಪತ್ನಿ ಹೇಳಿಕೊಂಡಿದ್ದಾರೆ ಎಂದು ಮಾಧ್ಯಮ ಸಂಸ್ಥೆ ವರದಿ ಮಾಡಿದೆ.
ಗಮನಾರ್ಹ ಸಂಗತಿ ಎಂದರೆ, ರಾಜೇಶ್ ಕೂಡಾ ಸಿಪಿಐ (ಎಂಎಲ್) ನೊಂದಿಗೆ ಸಂಬಂಧ ಹೊಂದಿದ್ದಾರೆಂದು ವರದಿಯಾಗಿದೆ. ನಾಯ್ಕ್ ಅವರ ಹತ್ಯೆಯು ನಿವಾಸಿಗಳಲ್ಲಿ ಭೀತಿಯನ್ನು ಸೃಷ್ಟಿಸಿದೆ. ಪೊಲೀಸರು ಕೊಲೆಯ ತನಿಖೆ ಆರಂಭಿಸಿದ್ದಾರೆ. ಹತ್ಯೆಗೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ.
ಈ ಮಧ್ಯೆ ಪ್ರತ್ಯೇಕ ಘಟನೆಯಲ್ಲಿ ರಾಜ್ಯದ ಮೇದಕ್ ಜಿಲ್ಲೆಯ ಕುಲ್ಚರಂ ಮಂಡಲದಲ್ಲಿ ಕಾಂಗ್ರೆಸ್ SC ಘಟಕದ ನಾಯಕ ಮರ್ರೆಲ್ಲಿ ಅನಿಲ್ (28) ಶವ ಪತ್ತೆಯಾಗಿದೆ. ಅವರ ದೇಹದ ಬಳಿ ಗುಂಡುಗಳು ಪತ್ತೆಯಾಗಿವೆ ಎಂದು ತೆಲಂಗಾಣ ಟುಡೇ ವರದಿ ಮಾಡಿದೆ. ಆದರೆ, ಸಾವಿನ ಕಾರಣ ಇನ್ನೂ ದೃಢಪಟ್ಟಿಲ್ಲ. ಅನಿಲ್ ಅವರ ಬಲ ಭುಜ ಮತ್ತು ಎದೆಯ ಮೇಲೆ ಗಾಯಗಳಾಗಿವೆ ಎಂದು ವರದಿಯಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
Advertisement