
ಗುವಾಹಟಿ: ಮಹಿಳೆಯೊಬ್ಬರು ಕುಡುಕ ಪತಿಯನ್ನು ಕೊಂದು, ಮನೆಯಲ್ಲಿಯೇ ಗುಂಡಿ ತೋಡಿ ಶವವನ್ನು ಹೂತು ಹಾಕಿರುವ ಘಟನೆ ಬೆಚ್ಚಿ ಬೀಳಿಸಿದೆ. ಗುವಾಹಟಿಯಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ಭಾನುವಾರ ಜಲುಕ್‌ಬರಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾಳೆ.
ಗುಜರಿ ವಸ್ತುಗಳ ಡೀಲರ್ ಆಗಿದ್ದ ತನ್ನ ಪತಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಜಗಳ ನಡೆದ ಜೂನ್ 26ರ ರಾತ್ರಿ ಪತಿಯನ್ನು ಕೊಂದಿರುವುದಾಗಿ ಮಹಿಳೆ ತಿಳಿಸಿದ್ದಾರೆ.
ಆತ ಕಂಠ ಪೂರ್ತಿ ಕುಡಿದು ಅಮಲಿನಲ್ಲಿರುವಾಗ ಕೋಪದ ಭರದಲ್ಲಿ ಕೊಂದಿರುವುದಾಗಿ ಆಕೆ ಹೇಳಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪತಿಯನ್ನು ಹತ್ಯೆಗೈದ ಬಳಿಕ ಆಕೆಯೇ ಮನೆಯ ಆವರಣದಲ್ಲಿ ನಾಲ್ಕೈದು ಅಡಿ ಗುಂಡಿಯನ್ನು ತೋಡಿ ಶವವನ್ನು ಹೂತು ಹಾಕಿದ್ದಾಳೆ. ಆಕೆಯೇ ಸ್ವತ: ಗುಂಡಿ ತೋಡಿ ಹೂಳಲು ಸಾಧ್ಯವಿಲ್ಲ, ಕೊಲೆಯಲ್ಲಿ ಇತರ ವ್ಯಕ್ತಿಗಳೂ ಭಾಗಿಯಾಗಿರುವ ಶಂಕೆ ಇದೆ. ಈ ಬಗ್ಗೆ ಕೆಲವು ಸುಳಿವು ಸಿಕ್ಕಿದ್ದು, ಅದರ ಮೇಲೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಅಧಿಕಾರಿ ಹೇಳಿದರು.
ಆಕೆಯ ಸೋದರ ಮಾವ ನಾಪತ್ತೆ ಪ್ರಕರಣ ದಾಖಲಿಸಿದ ನಂತರ ಮಹಿಳೆ ಪೊಲೀಸರ ಮುಂದೆ ಶರಣಾಗಿದ್ದಾಳೆ. ತನ್ನ ಪತಿ ಕೆಲಸದ ನಿಮಿತ್ತ ಕೇರಳಕ್ಕೆ ಹೋಗಿರುವುದಾಗಿ ಮಹಿಳೆ ಆರಂಭದಲ್ಲಿ ಮನೆಯವರಿಗೆ ಮತ್ತು ನೆರೆಹೊರೆಯವರಿಗೆ ತಿಳಿಸಿದ್ದಳು ಮತ್ತು ನಂತರ ಸ್ವತಃ ತಲೆಮರೆಸಿಕೊಂಡಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement