
ಅಹಮದಾಬಾದ್: ಗಂಡು ಮಗು ಬೇಕೆಂದು ತನ್ನ ಏಳು ವರ್ಷದ ಮಗಳನ್ನು ಕಾಲುವೆಗೆ ಎಸೆದು ಕೊಂದ ವ್ಯಕ್ತಿಯೊಬ್ಬನನ್ನು ಗುಜರಾತ್‌ನ ಖೇಡಾ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ಘಟನೆ ನಡೆದ ಕೆಲವು ದಿನಗಳ ನಂತರ ಅವರ ಪತ್ನಿ ಅಂಜನಾಬೆನ್ ಸೋಲಂಕಿ ಸತ್ಯವನ್ನು ಬಹಿರಂಗಪಡಿಸಿದ ನಂತರ ಕಪಡ್ವಂಜ್ ತಾಲ್ಲೂಕಿನ ಚೆಲಾವತ್ ಗ್ರಾಮದ ನಿವಾಸಿ ವಿಜಯ್ ಸೋಲಂಕಿ ಎಂಬಾತನನ್ನು ಬಂಧಿಸಲಾಗಿದೆ. ಜುಲೈ 10 ರಂದು ಗುರು ಪೂರ್ಣಿಮೆಯ ರಾತ್ರಿ ದೀಪೇಶ್ವರಿ ಮಾತಾ ದೇವಸ್ಥಾನಕ್ಕೆ ಕುಟುಂಬ ಸಮೇತ ಹೋಗುತ್ತಿದ್ದಾಗ ಈ ಕೊಲೆ ಮಾಡಲಾಗಿದೆ.
ಆರೋಪಿ ವಿಜಯ್ ಗಂಡು ಮಗು ಇಲ್ಲದ ಕಾರಣ ಅತೃಪ್ತನಾಗಿದ್ದ ಮತ್ತು ಆಗಾಗ್ಗೆ ತನ್ನ ಹೆಣ್ಣುಮಕ್ಕಳ ಮೇಲೆ ಕಿಡಿಕಾರುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಭೂಮಿಕಾ (7) ಮತ್ತು ಮೂರು ವರ್ಷದ ಮತ್ತೊಂದು ಮಗು ಸೇರಿದಂತೆ ಇಬ್ಬರು ಹೆಣ್ಣುಮಕ್ಕಳಿದ್ದರೂ, ಗಂಡು ಮಗುವನ್ನು ಹೊಂದುವ ಗೀಳು ಅವನನ್ನು ಬಿಟ್ಟಿರಲಿಲ್ಲ. ಇದರಿಂದ ಆತ ಮಗಳನ್ನು ಕೊಲೆ ಮಾಡಿದ್ದಾನೆ.
ಅಪರಾಧ ನಡೆದ ರಾತ್ರಿ, ಆರೋಪಿ ವಿಜಯ್ ಪತ್ನಿ ಅಂಜನಾಬೆನ್ ಮತ್ತು ಮಗಳು ಭೂಮಿಕಾಳನ್ನು ಮೋಟಾರ್ ಸೈಕಲ್‌ನಲ್ಲಿ ದೇವಸ್ಥಾನಕ್ಕೆ ಕರೆದೊಯ್ದನು. ಆತುರಾತುರದಲ್ಲಿ ಅಲ್ಲಿಂದ ಹೊರಟ ಬಳಿಕ ನರ್ಮದಾ ಕಾಲುವೆಯ ಮೇಲಿನ ವಾಘಾವತ್ ಸೇತುವೆ ದಾಟುತ್ತಿದ್ದಂತೆ, ಆತ ಬೈಕನ್ನು ನಿಲ್ಲಿಸಿದ್ದಾನೆ. ಮೀನು ತೋರಿಸುವ ನೆಪದಲ್ಲಿ ತನ್ನ ಅಳುತ್ತಿದ್ದ ಮಗಳನ್ನು ಕಾಲುವೆಯ ಅಂಚಿಗೆ ಕರೆದೊಯ್ದಿದ್ದಾನೆ.
ಅಂಜನಾಬೆನ್ ಪ್ರತಿಕ್ರಿಯಿಸುವ ಮೊದಲೇ, ವಿಜಯ್ ಮಗುವನ್ನು ಕಾಲುವೆಗೆ ಎಸೆದಿದ್ದಾನೆ. ಘಟನೆಯ ಬಗ್ಗೆ ಮಾತನಾಡಿದರೆ ವಿಚ್ಛೇದನ ನೀಡುವುದಾಗಿ ತನ್ನ ಹೆಂಡತಿಗೆ ಬೆದರಿಕೆ ಹಾಕಿದ್ದಾನೆ.
ಮರುದಿನ, ಭೂಮಿಕಾಳ ಶವ ಕಾಲುವೆಯಲ್ಲಿ ಪತ್ತೆಯಾಗಿದೆ. ಆರಂಭದಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಿಸಲಾಗಿತ್ತು. ಪತಿಯಿಂದ ಬೆದರಿಕೆಗೆ ಒಳಗಾಗಿದ್ದ ಅಂಜನಾಬೆನ್, ಭೂಮಿಕಾ ಕಾಲುವೆಗೆ ಬಿದ್ದಿದ್ದಾಳೆಂದು ಪೊಲೀಸರಿಗೆ ತಿಳಿಸಿದ್ದರು.
ಅಂಜನಾಬೆನ್ ನಂತರ ತನ್ನ ಸಹೋದರರಿಗೆ ಈ ವಿಷಯ ತಿಳಿಸಿದಾಗ, ಅವರು ದೂರು ನೀಡುವಂತೆ ಒತ್ತಾಯಿಸಿದ್ದಾರೆ. ನಂತರ ಅವರು ಅತರ್ಸುಬಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ವಿಚಾರಣೆಯ ಸಮಯದಲ್ಲಿ ಸೋಲಂಕಿ ಅಪರಾಧವನ್ನು ಒಪ್ಪಿಕೊಂಡಿದ್ದು, ತನಗೆ ಹೆಣ್ಣು ಮಕ್ಕಳು ಬೇಡ ಮತ್ತು ಮಗ ಬೇಕಾಗಿತ್ತು ಎಂದು ಹೇಳಿದ್ದಾನೆ. ತನ್ನ ಎರಡನೇ ಮಗಳು ಜನಿಸಿದಾಗಿನಿಂದ ಆರೋಪಿ ಅಂಜನಾಬೆನ್‌ಗೆ ಕಿರುಕುಳ ನೀಡುತ್ತಿದ್ದನು. ಇದರಿಂದ ಬೇಸತ್ತ ಆಕೆ ಹಲವು ಬಾರಿ ತವರು ಮನೆ ಸೇರಿದ್ದಳು. ಆದರೆ ಸುಳ್ಳು ರಾಜಿ ಮಾಡಿಕೊಳ್ಳುವ ಮೂಲಕ ಆತ ಆಕೆಯನ್ನು ಹಿಂದಕ್ಕೆ ಕರೆಸಿಕೊಂಡಿದ್ದ ಎಂದು ತಿಳಿದುಬಂದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಗಾಧಿಯಾ ಮಾತನಾಡಿ, ಆಕಸ್ಮಿಕ ಸಾವಿನ ಪ್ರಕರಣವನ್ನು ಈಗ ಕೊಲೆ ತನಿಖೆಯಾಗಿ ಪರಿವರ್ತಿಸಲಾಗಿದೆ. ವಿಜಯ್ ಮೂಢನಂಬಿಕೆಗಳಿಗೆ ಒಳಗಾಗಿ ತನ್ನ ಮಗಳನ್ನು ಬಲಿಕೊಡಲು ಉದ್ದೇಶಿಸಿರಬಹುದು ಎಂಬ ಅಂಜನಾಬೆನ್ ಅವರ ಕುಟುಂಬದ ಆರೋಪಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಧಾರ್ಮಿಕ ಉದ್ದೇಶಗಳ ಬಗ್ಗೆ ಯಾವುದೇ ಪುರಾವೆಗಳು ಇನ್ನೂ ಹೊರಬಂದಿಲ್ಲ ಎಂದರು.
ಕೊಲೆ, ಕ್ರಿಮಿನಲ್ ಬೆದರಿಕೆ ಮತ್ತು ಕೌಟುಂಬಿಕ ದೌರ್ಜನ್ಯದ ಆರೋಪದ ಮೇಲೆ ಸೋಲಂಕಿಯನ್ನು ವಶಕ್ಕೆ ಪಡೆಯಲಾಗಿದೆ. ಭೂಮಿಕಾಗೆ ನ್ಯಾಯ ಒದಗಿಸಲು ತ್ವರಿತ ಮತ್ತು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
Advertisement