
ನವದೆಹಲಿ: ಬಿಹಾರದಲ್ಲಿ ಚುನಾವಣಾ ಆಯೋಗ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' ನಡೆಸುತ್ತಿದ್ದು, ಇದು ಅಲ್ಲಿನ ಮತದಾರರಿಗೆ ಮಾಡಿದ ವಂಚನೆಯಾಗಿದೆ ಮತ್ತು ಚುನಾವಣಾ ಆಯೋಗವು ಬಿಜೆಪಿ ಪರವಾಗಿ ವರ್ತಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದಾರೆ.
ಸರ್ಕಾರಿ ಅಧಿಕಾರಿಗಳು ಮತದಾರರಿಗೆ ತಿಳಿಯದೆ ಮತದಾರರ ನಮೂನೆಗಳನ್ನು ಭರ್ತಿ ಮಾಡಿ ಸಹಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪತ್ರಕರ್ತರೊಬ್ಬರು ಪೋಸ್ಟ್ ಮಾಡಿದ ವಿಡಿಯೋವನ್ನು ಹಂಚಿಕೊಂಡಿರುವ ರಾಹುಲ್, ಚುನಾವಣಾ ಆಯೋಗ ಇನ್ನೂ ತಟಸ್ಥ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಅಥವಾ ಬಿಜೆಪಿಯ 'ಚುನಾವಣಾ ಕಳ್ಳತನ' ಶಾಖೆಯಾಗಿ ಸಂಪೂರ್ಣವಾಗಿ ಬದಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.
'ಬಿಹಾರದಲ್ಲಿ ಚುನಾವಣಾ ಆಯೋಗ 'SIR' ಹೆಸರಿನಲ್ಲಿ ಮತಗಳನ್ನು ಕದಿಯುವಾಗ ಸಿಕ್ಕಿಬಿದ್ದಿದೆ. ಅವರ ಕೆಲಸವೇ ಕಳ್ಳತನ ಮಾಡುವುದಾಗಿದೆ. ಅದಕ್ಕೆ 'SIR' ಅಂತ ಹೆಸರಿಸಲಾಗಿದೆ. ಅವುಗಳನ್ನು ಬಹಿರಂಗಪಡಿಸುವವರ ವಿರುದ್ಧ FIR ದಾಖಲಿಸಲಾಗುತ್ತಿದೆ! ಚುನಾವಣಾ ಆಯೋಗ ಇನ್ನೂ 'ಚುನಾವಣಾ ಆಯೋಗ'ವೇ ಅಥವಾ ಅದು ಸಂಪೂರ್ಣವಾಗಿ ಬಿಜೆಪಿಯ 'ಚುನಾವಣಾ ಕಳ್ಳತನ' ಶಾಖೆಯಾಗಿದೆಯೇ?' ಎಂದು ಎಕ್ಸ್‌ನಲ್ಲಿ ರಾಹುಲ್ ಬರೆದುಕೊಂಡಿದ್ದಾರೆ.
ಜುಲೈ 10 ರಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಬಿಹಾರದಲ್ಲಿ ಕೈಗೆತ್ತಿಕೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಮುಂದುವರಿಸಲು ಅನುಮತಿ ನೀಡಿದೆ ಮತ್ತು ಆಧಾರ್ ಕಾರ್ಡ್, ಪಡಿತರ ಚೀಟಿಗಳು ಮತ್ತು ಮತದಾರರ ಗುರುತಿನ ಪತ್ರಗಳನ್ನು (ಎಪಿಕ್) ಮತದಾರರ ಗುರುತನ್ನು ಸಾಬೀತುಪಡಿಸಲು ಕ್ರಮಬದ್ಧ ದಾಖಲೆಗಳನ್ನಾಗಿ ಪರಿಗಣಿಸುವಂತೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಹಾಗೂ ಜಾಯ್‌ಮಾಲ್ಯಾ ಬಾಗ್ಚಿ ಅವರಿದ್ದ ನ್ಯಾಯಪೀಠ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವುದಕ್ಕೆ ಪರಿಗಣಿಸಲಾಗಿರುವ 11 ದಾಖಲೆಗಳ ಪಟ್ಟಿಯಲ್ಲಿ ಆಧಾರ್ ಕಾರ್ಡ್, ಎಪಿಕ್ ಮತ್ತು ಪಡಿತರ ಚೀಟಿಗಳನ್ನು ಪರಿಗಣಿಸದೇ ಇರುವುದಕ್ಕೆ ಸೂಕ್ತ ಕಾರಣಗಳನ್ನು ನೀಡುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
'ನ್ಯಾಯದ ಹಿತದೃಷ್ಟಿಯಿಂದ ಚುನಾವಣಾ ಆಯೋಗವು ಆಧಾರ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಮುಂತಾದ ದಾಖಲೆಗಳನ್ನು ಸಹ ಆ ಪಟ್ಟಿಗೆ ಸೇರಿಸುತ್ತದೆ ಎಂದು ನಾವು ಪ್ರಾಥಮಿಕವಾಗಿ ಅಭಿಪ್ರಾಯಪಟ್ಟಿದ್ದೇವೆ. ದಾಖಲೆಗಳನ್ನು ಸ್ವೀಕರಿಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವುದು ಚುನಾವಣಾ ಆಯೋಗಕ್ಕೆ ಬಿಟ್ಟದ್ದು ಮತ್ತು ಅದು ಸ್ವೀಕರಿಸದಿದ್ದರೆ, ಅದರ ನಿರ್ಧಾರಕ್ಕೆ ಕಾರಣಗಳನ್ನು ಒದಗಿಸಬೇಕು. ಈಮಧ್ಯೆ, 'ಅರ್ಜಿದಾರರು ಯಾವುದೇ ಮಧ್ಯಂತರ ಪರಿಹಾರ ಕೋರಿಲ್ಲ' ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.
Advertisement