
ಭುವನೇಶ್ವರ: ಅಲ್ಪಸಂಖ್ಯಾತ ಸಮುದಾಯದ 15 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ದಾಳಿ ನಡೆಸಿದ ಯುವಕರ ಗುಂಪೊಂದು ಆಕೆಗೆ ಬೆಂಕಿ ಹಚ್ಚಿರುವ ಘಟನೆ ಪುರಿಯ ಬಾಲಂಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.ಸುಟ್ಟ ಗಾಯಗಳಿಂದ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಸ್ಥಳೀಯರು ಭುವನೇಶ್ವರದ AIIIMS ಗೆ ಸ್ಥಳಾಂತರಿಸಿ ಚಿಕಿತ್ಸೆ ಒದಗಿಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಇದೊಂದು ಪೂರ್ವ ನಿಯೋಜಿತ ಕೃತ್ಯವೆಂಬುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುರಿ ಜಿಲ್ಲೆಯ ಹಂಗಾಮಿ ಎಸ್ ಪಿ ಹಾಗೂ ಡಿಐಜಿ ಪಿನಾಕ್ ಮಿಶ್ರಾ ನೇತೃತ್ವದ ಪೊಲೀಸ್ ತಂಡ ಅಪರಾಧದ ಸ್ಥಳದಲ್ಲಿ ತನಿಖೆ ನಡೆಸಿದ್ದು, ಎರಡು ಬಾಟಲ್ ಬಹುಶ: ಸೀಮೆಎಣ್ಣೆ ಪತ್ತೆಯಾಗಿದೆ. ಸಂತ್ರಸ್ತೆ ತನ್ನ ಸ್ನೇಹಿತೆಯ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಬೈಕ್ ನಲ್ಲಿ ಬಂದ ಮೂವರು ಯುವಕರು, ಕರ್ಚೀಪ್ ನಿಂದ ಆಕೆಯ ಬಾಯಿ ಬಿಗಿದು ಅಪಹರಿಸಿದ್ದು, ಭಾರ್ಗವಿ ನದಿಯ ದಡಕ್ಕೆ ಕರೆದೊಯ್ದಿದ್ದಾರೆ. ಬಳಿಕ ಸೀಮೆಎಣ್ಣೆ ರೀತಿಯ ದ್ರಾವಣ ಬಳಸಿ ಬೆಂಕಿ ಹಚ್ಚಿದ್ದಾರೆ.
ತನ್ನ ಜೀವ ಉಳಿಸಿಕೊಳ್ಳಲು ಅಪ್ರಾಪ್ತ ಬಾಲಕಿ ಸಮೀಪದ ಹಳ್ಳಿಯ ಕಡೆಗೆ ಓಡಿ ನೆರವಿಗಾಗಿ ಕೂಗಿದಾಗ ಸ್ಥಳೀಯ ನಿವಾಸಿ ದುಃಖಿಶ್ಯಾಮ್ ಸೇನಾಪತಿ,ಬೆಂಕಿಯನ್ನು ನಂದಿಸಿದ್ದು, ರಕ್ಷಿಸಿದ್ದಾರೆ. ಬಳಿಕ ಆಕೆಯನ್ನು ತನ್ನ ಮನೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಹಾಗೂ ಹೊಸ ಬಟ್ಟೆಗಳನ್ನು ಒದಗಿಸಿದ್ದಾರೆ.
ಬೆಂಕಿ ನಂದಿಸಿದ ನಂತರ ಘಟನೆ ಕುರಿತು ಬಾಲಕಿ ಬಳಿ ಕೇಳಿದಾಗ ಮೂವರು ಯುವಕರು, ಆಕೆಯನ್ನು ಬಲವಂತದಿಂದ ಕರೆದೊಯ್ದು ಬೆಂಕಿ ಹಚ್ಚಿರುವುದಾಗಿ ತಿಳಿಸಿರುವುದಾಗಿ ಸೇನಾಪತಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ದುಷ್ಕರ್ಮಿಗಳಿಗಾಗಿ ಸೇನಾಪತಿ ಕೂಡಾ ಹುಡುಕಾಡಿದ್ದಾರೆ. ಆದರೆ, ಅವರು ಪರಾರಿಯಾಗಿದ್ದರು. ಬೆಳಗ್ಗೆ 8-30ರ ವೇಳೆಯಲ್ಲಿ ಘಟನೆ ನಡೆದಿರುವುದನ್ನು ಗಮಿಸಿದರೆ ಪೂರ್ವ ನಿಯೋಜಿತ ಪ್ಲಾನ್ ಎಂಬುದು ಕಂಡುಬರುತ್ತದೆ. ಬಾಲಕಿ ಚಲನವಲನ ಗೊತ್ತಿದ್ದ ದುಷ್ಕರ್ಮಿಗಳು ಸಜ್ಜಾಗಿ ಬಂದು ಕೃತ್ಯ ನಡೆಸಿದ್ದಾರೆ. ಈ ಕುರಿತು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಇಲ್ಲಿಯವರೆಗೂ ಯಾರನ್ನೂ ಪೊಲೀಸರು ಬಂಧಿಸಿಲ್ಲ. ಆದರೆ ಹೀನಕೃತ್ಯ ನಡೆಸಿದವರನ್ನು ಯಾಕೆ ಇಲ್ಲಿಯವರೆಗೂ ಬಂಧಿಸಿಲ್ಲ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಈ ಮಧ್ಯೆ ಶೇ. 70 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿರುವ ಬಾಲಕಿಯನ್ನು ಭುವನೇಶ್ವರದ AIIMS ನಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
Advertisement