
ನವದೆಹಲಿ: ಅಹ್ಮದಾಬಾದ್ ವಿಮಾನ ನಿಲ್ದಾಣದ ಸಮೀಪ ಪತನಕ್ಕೀಡಾದ ಏರ್ ಇಂಡಿಯಾ ವಿಮಾನ (Air india) ದುರಂತದ ಕುರಿತು ವರದಿ ಮಾಡಿದ್ದ ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ (Wall Street Journal) ಮತ್ತು ರಾಯಿಟರ್ಸ್ (Reuters) ಸುದ್ದಿಸಂಸ್ಥೆ ವಿರುದ್ಧ ಭಾರತೀಯ ಪೈಲಟ್ ಗಳ ಒಕ್ಕೂಟ ಕಾನೂನು ಸಮರಕ್ಕೆ ಮುಂದಾಗಿದೆ.
ಭಾರತೀಯ ಪೈಲಟ್‌ಗಳ ಒಕ್ಕೂಟ (ಎಫ್‌ಐಪಿ) ಅಧ್ಯಕ್ಷ ಕ್ಯಾಪ್ಟನ್ ಸಿಎಸ್ ರಾಂಧವ ಶನಿವಾರ ವಾಲ್ ಸ್ಟ್ರೀಟ್ ಜರ್ನಲ್ ಮತ್ತು ರಾಯಿಟರ್ಸ್ ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಂಡರು. 250 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಎಐ-171 ವಿಮಾನ ಅಪಘಾತದ ಕುರಿತು ವಿಮಾನ ಅಪಘಾತ ತನಿಖಾ ಬ್ಯೂರೋದ (ಎಎಐಬಿ) ಪ್ರಾಥಮಿಕ ವರದಿಯನ್ನು ಎತ್ತಿ ತೋರಿಸುತ್ತಾ, 'ಈ ಸುದ್ದಿಸಂಸ್ಥೆಗಳು ಪ್ರಕಟಿಸಿದ್ದ ವರದಿಗಳು ವಾಸ್ತವಿಕ ವಿಷಯಗಳ ಮೇಲೆ ಆಧರಿಸಿಲ್ಲ' ಎಂದು ಆರೋಪಿಸಿದರು.
ಇದೇ ಕಾರಣಕ್ಕೆ ದಿ ವಾಲ್ ಸ್ಟ್ರೀಟ್ ಜರ್ನಲ್ ಮತ್ತು ರಾಯಿಟರ್ಸ್ ಸುದ್ದಿಸಂಸ್ಥೆಗಳ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದೆ. ಅಲ್ಲದೆ ಅಧಿಕೃತವಾಗಿ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಎಫ್‌ಐಪಿ ಅಧ್ಯಕ್ಷ ಕ್ಯಾಪ್ಟನ್ ಸಿಎಸ್ ರಾಂಧವ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ದಿ ವಾಲ್ ಸ್ಟ್ರೀಟ್ ಜರ್ನಲ್ ಮತ್ತು ರಾಯಿಟರ್ಸ್‌ಗೆ ಔಪಚಾರಿಕ ನೋಟಿಸ್ ಮೂಲಕ ಎಫ್‌ಐಪಿ ಕಾನೂನು ಕ್ರಮ ಕೈಗೊಂಡ ನಂತರ ಕ್ಯಾಪ್ಟನ್ ಸಿಎಸ್ ರಾಂಧವ ಅವರ ಹೇಳಿಕೆ ಬಂದಿದೆ.
ಡಬ್ಲ್ಯೂಎಸ್‌ಜೆ ಮತ್ತು ರಾಯಿಟರ್ಸ್ ಅನ್ನು ತೀವ್ರವಾಗಿ ಟೀಕಿಸಿದ ರಾಂಧವ, 'ಈ ಸುದ್ದಿ ಸಂಸ್ಥೆಗಳು ತಮ್ಮ ತಪ್ಪು ವರದಿಗಳ ಮೂಲಕ ಸಾರ್ವಜನಿಕರ ದಾರಿ ತಪ್ಪಿಸುತ್ತಿವೆ. ಅವರ ವರದಿಗಳು ವಾಸ್ತವಿಕ ವಿಷಯವನ್ನು ಆಧರಿಸಿಲ್ಲ. ಸಾರ್ವಜನಿಕರನ್ನು ದಾರಿತಪ್ಪಿಸಿದ್ದಕ್ಕಾಗಿ ನಾನು ವಾಲ್ ಸ್ಟ್ರೀಟ್ ಜರ್ನಲ್ ಅನ್ನು ಸಂಪೂರ್ಣವಾಗಿ ದೂಷಿಸುತ್ತೇನೆ, ಅವರು ತಮ್ಮದೇ ಆದ ತೀರ್ಮಾನಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.
ಅಂತೆಯೇ, 'ಅವರೇನು ತನಿಖಾ ಸಂಸ್ಥೆಯೇ? ಅವರು ಪ್ರಪಂಚದಾದ್ಯಂತ ಇಷ್ಟೆಲ್ಲಾ ಕೆಟ್ಟ ವಿಷಯಗಳನ್ನು ಮಾತನಾಡುತ್ತಿದ್ದಾರೆ. ಅವರು ತನಿಖಾ ಸಂಸ್ಥೆಯಲ್ಲ, ಮತ್ತು ಅವರು ಪ್ರಕಟಿಸಿರುವ ವರದಿಗಳು ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾದ ಯಾವುದೇ ವಾಸ್ತವಿಕ ವಿಷಯವನ್ನು ಆಧರಿಸಿಲ್ಲ. ಹೀಗಿರುವಾಗ ಅವರು ಹೇಗೆ ತೀರ್ಮಾನಕ್ಕೆ ಬಂದು ಪ್ರಪಂಚದಾದ್ಯಂತ ಪತ್ರಿಕಾ ಹೇಳಿಕೆಗಳನ್ನು ನೀಡಬಹುದು?" ಪ್ರಶ್ನಿಸಿದರು.
AAIB ಪ್ರಾಥಮಿಕ ವರದಿಗಳ ವರದಿಯ ವಿವರಣೆಯನ್ನು ನೀಡುವ ಮೂಲಕ FIP ಪತ್ರಿಕಾ ಹೇಳಿಕೆಯನ್ನು ನೀಡುವಂತೆ ಕೇಳಿಕೊಂಡು ಕಾನೂನು ಸೂಚನೆ ನೀಡಿದೆ ಎಂದು ಕ್ಯಾಪ್ಟನ್ ರಾಂಧವ ಹೇಳಿದರು.
ಲೀಗಲ್ ನೋಟಿಸ್ ಜಾರಿ ಮಾಡಿದ್ದೇವೆ?
ಇದೇ ವೇಲೆ ತಪ್ಪು ವರದಿ ಪ್ರಕಟಿಸಿದ ವಾಲ್ ಸ್ಟ್ರೀಟ್ ಜರ್ನಲ್ ಮತ್ತು ರಾಯಿಟರ್ಸ್ ಸಂಸ್ಥೆಗಳಿಗೆ ಲೀಗಲ್ ನೋಟಿಸ್ ಜಾರಿ ಮಾಡಿದ್ದೇವೆ. 'ನಾವು ಅದನ್ನು ಬಲವಾಗಿ ಖಂಡಿಸುತ್ತೇವೆ ಮತ್ತು ನಾವು ವಾಲ್ ಸ್ಟ್ರೀಟ್ ಜರ್ನಲ್ ಮತ್ತು ರಾಯಿಟರ್ಸ್‌ಗೆ ಕಾನೂನು ಸೂಚನೆಗಳನ್ನು ಸಹ ನೀಡಿದ್ದೇವೆ.
AAIB ಯ ಪ್ರಾಥಮಿಕ ವರದಿಯ ಭಾಗವಲ್ಲದ ಈ ತೀರ್ಮಾನಗಳಿಗೆ ನೀವು ಹೇಗೆ ಧಾವಿಸುತ್ತೀರಿ ಎಂದು ನಾವು ಸ್ಪಷ್ಟವಾಗಿ ಹೇಳಿದ್ದೇವೆ. ದುರಂತಕ್ಕೆ ನೀವು ಹೇಗೆ ಪೈಲಟ್‌ಗಳನ್ನು ದೂಷಿಸುತ್ತೀರಿ..? ಆದ್ದರಿಂದ ನಾವು ಆ ಸಂಸ್ಥೆಗಳಿಂದ ವಿವರಣೆಯನ್ನು ಕೇಳಿದ್ದೇವೆ ಎಂದು ರಾಂಧವ ಹೇಳಿದರು.
ಅವರ ಉತ್ತರಕ್ಕಾಗಿ ಕಾಯುತ್ತೇವೆ. ಒಂದು ವೇಳೆ ಅವರಿಂದ ಸೂಕ್ತ ಉತ್ತರ ದೊರೆಯದಿದ್ದರೆ ಮುಂದಿನ ಕ್ರಮ ಜರುಗಿಸುತ್ತೇವೆ ಎಂದು ರಾಂಧವ ಹೇಳಿದರು.
Advertisement