
ನವದೆಹಲಿ: ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳ ಪ್ರಕರಣದ ತನಿಖೆಯ ಭಾಗವಾಗಿ, ಜಾರಿ ನಿರ್ದೇಶನಾಲಯ ಶನಿವಾರ ಟೆಕ್ ದೈತ್ಯ ಕಂಪನಿಗಳಾದ ಮೆಟಾ ಮತ್ತು ಗೂಗಲ್ ಗೆ ಸಮನ್ಸ್ ಜಾರಿ ಮಾಡಿದ್ದು, ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ಗೂಗಲ್, ಮೆಟಾಗೆ ಇಡಿ ಸಮನ್ಸ್ ಜಾರಿ ಮಾಡಿದ್ದು, ಜುಲೈ 21 ರಂದು ತನಿಖಾ ಸಂಸ್ಥೆಯ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸುವಂತೆ ಸೂಚಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ಬೆಳವಣಿಗೆ ಬಗ್ಗೆ ಎರಡೂ ಕಂಪನಿಗಳು ಇನ್ನೂ ಯಾವುದೇ ಸಾರ್ವಜನಿಕ ಹೇಳಿಕೆ ಅಥವಾ ಇಡಿಗೆ ತಮ್ಮ ಪ್ರತಿಕ್ರಿಯೆಯ ನೀಡಿಲ್ಲ.
ಅಕ್ರಮ ಬೆಟ್ಟಿಂಗ್ ಮತ್ತು ಜೂಜಾಟ ಲಿಂಕ್‌ಗಳನ್ನು ಹೊಂದಿರುವ ಹಲವು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ವಿರುದ್ಧ ಇಡಿ ತನಿಖೆ ನಡೆಸುತ್ತಿದೆ.
ಏಜೆನ್ಸಿ ಮೂಲಗಳ ಪ್ರಕಾರ, ಗೂಗಲ್ ಹಾಗೂ ಮೆಟಾ ಸಂಸ್ಥೆಗಳು ಬೆಟ್ಟಿಂಗ್ ಆ್ಯಪ್ ಗಳನ್ನು ಜಾಹೀರಾತುಗಳ ಮೂಲಕ ಪ್ರಚಾರ ಮಾಡುತ್ತಾ, ಅವು ಬಳಕೆದಾರರನ್ನು ತಲುಪುವಂತೆ ನೆರವು ನೀಡುತ್ತಿವೆ ಎಂದು ಆರೋಪಿಸಲಾಗಿದೆ.
ಗಮನಾರ್ಹವಾಗಿ, ಈ ಪ್ರಕರಣಗಳಲ್ಲಿ ಕ್ರೀಡಾ ಮತ್ತು ಸಿನಿಮಾ ಕ್ಷೇತ್ರದ ಕೆಲವು ಸೆಲೆಬ್ರಿಟಿಗಳು ಸಹ ಇಡಿಯ ಪರಿಶೀಲನೆಯಲ್ಲಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ ನಟರಾದ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಹಾಗೂ ಪ್ರಕಾಶ್ ರೈ ಸೇರಿದಂತೆ 29 ಸೆಲೆಬ್ರಿಟಿಗಳ ವಿರುದ್ಧ ಇಡಿ ಕೇಸ್ ದಾಖಲಿಸಿದೆ ಮತ್ತು ಇನ್ನೂ ಕೆಲವರಿಗೆ ಶೀಘ್ರದಲ್ಲೇ ಸಮನ್ಸ್ ಜಾರಿ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
Advertisement