
ವಿಜಯವಾಡ: ಆಂಧ್ರ ಪ್ರದೇಶದ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ರೂ. 3,200 ಕೋಟಿ ಮೊತ್ತದ ಮದ್ಯ ಹಗರಣದಲ್ಲಿ ವೈಎಸ್‌ಆರ್‌ಸಿಪಿ ಲೋಕಸಭಾ ಸದಸ್ಯ ಪಿವಿ ಮಿಧುನ್ ರೆಡ್ಡಿ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಮದ್ಯ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಮಿಧುನ್ ರೆಡ್ಡಿಯನ್ನು ಇಂದು ಹಲವು ಗಂಟೆಗಳ ಕಾಲ ತನಿಖೆ ನಡೆಸಿತು. ಬಳಿಕ ವಿಜಯವಾಡದಲ್ಲಿನ ಅವರ ನಿವಾಸದಲ್ಲಿ ರಾತ್ರಿ 7-30ರ ಸುಮಾರಿನಲ್ಲಿ ಬಂಧಿಸಿತು.
ಮಿಧುನ್ ರೆಡ್ಡಿ ಅವರನ್ನು ಬಂಧಿಸಲಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಎಂದು ಗೃಹ ಸಚಿವ ವಂಗಲಪುಡಿ ಅನಿತಾ ಹೇಳಿದ್ದಾರೆ. ಮಿಧುನ್ ರೆಡ್ಡಿ ಅವರು ಆಂಧ್ರಪ್ರದೇಶದ ರಾಜಂಪೇಟೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಮದ್ಯ ಹಗರಣದಲ್ಲಿ ಇತರ ಆರೋಪಿಗಳಾದ ಧನುಂಜಯ್ ರೆಡ್ಡಿ, ಕೃಷ್ಣ ಮೋಹನ್ ರೆಡ್ಡಿ ಮತ್ತು ಬಾಲಾಜಿ ಗೋವಿಂದಪ್ಪ ಅವರನ್ನು ಬಂಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಲು ಇಂದು ಬೆಳಗೆ ವಿಜಯವಾಡಕ್ಕೆ ಮಿಧುನ್ ರೆಡ್ಡಿ ಆಗಮಿಸಿದ್ದರು.
ಈ ಮಧ್ಯೆ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಸೇಡಿನ ರಾಜಕೀಯದಲ್ಲಿ ತೊಡಗಿದ್ದಾರೆ ಮತ್ತು ವೈಎಸ್ ಜಗನ್ ಮೋಹನ್ ರೆಡ್ಡಿ ಆಪ್ತರ ವಿರುದ್ಧ 'ಸುಳ್ಳು' ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ವೈಎಸ್‌ಆರ್‌ಸಿಪಿ ಆರೋಪಿಸಿದೆ.
Advertisement