
ನವದೆಹಲಿ: ಸೂಪರ್‌ಸ್ಟಾರ್ ಕಮಲ್ ಹಾಸನ್ ತಮಿಳುನಾಡಿನಿಂದ ರಾಜ್ಯಸಭೆ ಸದಸ್ಯರಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ನಟ ತಮಿಳಿನಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದಾಗ ಸಹ ಸಂಸದರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಮಕ್ಕಳ್ ನೀಧಿ ಮೈಯ್ಯಂ (ಎಂಎನ್ಎಂ) ಪಕ್ಷದ ಸಂಸ್ಥಾಪಕರೂ ಆಗಿರುವ 69 ವರ್ಷದ ಕಮಲ್ ಹಾಸನ್ ಅವರಿಗೆ ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ನಾರಾಯಣ ಸಿಂಗ್ ಅವರು ಪ್ರಮಾಣವಚನ ಬೋಧಿಸಿದರು.
'ಥಗ್ ಲೈಫ್' ಚಿತ್ರದ ನಟ ತಮ್ಮ ಮಹತ್ವದ ರಾಜಕೀಯ ಮೈಲಿಗಲ್ಲಿನ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.
ಸಂಸತ್ತಿನ ಹೊರಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ನನಗೆ ತುಂಬಾ ಹೆಮ್ಮೆ ಮತ್ತು ಗೌರವವಿದೆ' ಎಂದು ಹೇಳಿದರು.
ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷ ತನ್ನ ಮಿತ್ರಪಕ್ಷವಾದ ಎಂಎನ್ಎಂ ಪಕ್ಷಕ್ಕೆ ಒಂದು ಸ್ಥಾನ ಬಿಟ್ಟುಕೊಟ್ಟಿತ್ತು. ಆ ಮೂಲಕ ರಾಜ್ಯಸಭೆಗೆ ಕಮಲ್ ಹಾಸನ್ ಅವರನ್ನು ಬೆಂಬಲಿಸಿತ್ತು.
2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಮಲ್ ಹಾಸನ್ ನೇತೃತ್ವದ ಎಂಎನ್‌ಎಂ ಪಕ್ಷದ ಜೊತೆ ಮಾಡಿಕೊಂಡ ಒಪ್ಪಂದದ ಪ್ರಕಾರ ರಾಜ್ಯಸಭಾ ಸ್ಥಾನವನ್ನು ನೀಡುವ ಭರವಸೆ ನೀಡಿದ್ದ ಆಡಳಿತಾರೂಢ ಡಿಎಂಕೆ ನೇತೃತ್ವದ ಮೈತ್ರಿಕೂಟದ ಬೆಂಬಲದೊಂದಿಗೆ ಅವರನ್ನು ನಾಮನಿರ್ದೇಶನ ಮಾಡಲಾಯಿತು.
ಜೂನ್ 6 ರಂದು ತಮಿಳುನಾಡು ಸಚಿವಾಲಯದಲ್ಲಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಮತ್ತು ವಿಸಿಕೆ ನಾಯಕ ತೋಲ್. ತಿರುಮಾವಲವನ್, ಎಂಡಿಎಂಕೆಯ ವೈಕೊ ಮತ್ತು ತಮಿಳುನಾಡು ಕಾಂಗ್ರೆಸ್ ಮುಖ್ಯಸ್ಥ ಸೆಲ್ವಪೆರುಂಥಗೈ ಸೇರಿದಂತೆ ಡಿಎಂಕೆ ಮಿತ್ರಪಕ್ಷಗಳ ಸಮ್ಮುಖದಲ್ಲಿ ಕಮಲ್ ಹಾಸನ್ ನಾಮಪತ್ರ ಸಲ್ಲಿಸಿದರು.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ, ರಾಜ್ಯಸಭೆಯಲ್ಲಿ ಸ್ಥಾನ ಗೆಲ್ಲಲು ಒಬ್ಬ ಅಭ್ಯರ್ಥಿಗೆ ಕನಿಷ್ಠ 34 ಮತಗಳು ಬೇಕಾಗುತ್ತವೆ.
ಡಿಎಂಕೆ ನೇತೃತ್ವದ ಇಂಡಿಯಾ ಬಣದಿಂದ 158 ಶಾಸಕರೊಂದಿಗೆ (ಡಿಎಂಕೆ-133, ಕಾಂಗ್ರೆಸ್-17, ವಿಸಿಕೆ-4, ಸಿಪಿಐ-2, ಸಿಪಿಎಂ-2) ಮೈತ್ರಿಕೂಟವು ನಾಲ್ಕು ಸ್ಥಾನಗಳನ್ನು ಪಡೆಯುವಷ್ಟು ಆರಾಮದಾಯಕ ಸ್ಥಾನದಲ್ಲಿತ್ತು.
ಎಂಎನ್ಎಂ 2024 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ ಮತ್ತು ಬದಲಾಗಿ ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಸಂಪೂರ್ಣ ಬೆಂಬಲ ನೀಡಿತ್ತು. 2021ರ ವಿಧಾನಸಭಾ ಚುನಾವಣೆಯಲ್ಲಿ, ಎಂಎನ್ಎಂ ಶೇ 2.62 ರಷ್ಟು ಮತಗಳನ್ನು ಗಳಿಸಿತ್ತು.
ಜೂನ್ 12 ರಂದು, ಮಕ್ಕಳ್ ನೀಧಿ ಮೈಯ್ಯಂ (ಎಂಎನ್ಎಂ) ಅಧ್ಯಕ್ಷ ಕಮಲ್ ಹಾಸನ್ ಮತ್ತು ಇತರ ಐದು ಮಂದಿ ತಮಿಳುನಾಡಿನಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದರು.
Advertisement