
ನವದೆಹಲಿ: ಸಂಸತ್ತಿನಲ್ಲಿ ಸೋಮವಾರ ಆಪರೇಷನ್ ಸಿಂಧೂರ್ ಕುರಿತು ಚರ್ಚೆ ಆರಂಭವಾಗುತ್ತಿದ್ದಂತೆಯೇ ಬಲೂಚ್ ಚಳುವಳಿಯ ಪ್ರಮುಖ ನಾಯಕ ಮೀರ್ ಯಾರ್, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬಹಿರಂಗ ಪತ್ರವೊಂದನ್ನು ಬರೆದು, ಭಾರತದ ಮಿಲಿಟರಿ ಕಾರ್ಯಾಚರಣೆಗೆ ಬೇಷರತ್ ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಬಲೂಚಿಸ್ತಾನದ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವಂತೆ ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೂ ಪತ್ರ ಬರೆದಿರುವ ಮೀರ್ ಯಾರ್, ಪಾಕ್ ಬೆಂಬಲಿತ ಭಯೋತ್ಪಾದನೆ ವಿರುದ್ಧ ಭಾರತದ ಏಕತೆ ಮತ್ತು ಸಂಕಲ್ಪವನ್ನು ಶ್ಲಾಘಿಸಿದ್ದಾರೆ.
60 ಮಿಲಿಯನ್ ಬಲೂಚ್ ಜನರು, ಭಾರತೀಯ ಜನರ ಅಚಲವಾದ ಏಕತೆ ಮತ್ತು ಭಾರತ ಸರ್ಕಾರದ ತತ್ವಬದ್ಧ ನಿಲುವನ್ನು ಮೆಚ್ಚುತ್ತೇವೆ ಎಂದು ಅವರು ಹೇಳಿದ್ದಾರೆ.
ಸರ್ಕಾರ ಮತ್ತು ಸಶಸ್ತ್ರ ಪಡೆಗಳನ್ನು ಬೆಂಬಲಿಸಿದ್ದಕ್ಕಾಗಿ ಪ್ರತಿಪಕ್ಷಗಳನ್ನು ಶ್ಲಾಘಿಸಿದ್ದು, ಪಾಕ್ ಮಿಲಿಟರಿ ಮತ್ತು ಮಾನಸಿಕ ಆಕ್ರಮಣ ಎದುರಿಸುವಲ್ಲಿ ಭಾರತೀಯ ಮಾಧ್ಯಮದ "ದೇಶಭಕ್ತಿಯ ಪಾತ್ರ" ಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಪರೇಷನ್ ಸಿಂಧೂರ್ ವಿರಾಮದ ನಂತರ ಭಾರತಕ್ಕೆ ಬೆಂಬಲ ನೀಡಿದ್ದಕ್ಕಾಗಿ ಬಲೂಚಿಸ್ತಾನದಲ್ಲಿ ಪಾಕಿಸ್ತಾನಿ ಮಿಲಿಟರಿ ಕ್ರೌರ್ಯ ಮೆರೆಯುತ್ತಿದೆ. ಭಾರತ ಒಗ್ಗಟ್ಟ ತೋರಬೇಕಾಗಿದೆ. ಬಲೂಚಿಸ್ತಾನ ಭಾರತವನ್ನು ಭರವಸೆ ಮತ್ತು ನ್ಯಾಯದ ದಾರಿದೀಪವಾಗಿ ನೋಡುತ್ತದೆ ಎಂದು ಮೀರ್ ಯಾರ್ ಹೇಳಿದ್ದಾರೆ.
ಬಲೂಚಿಸ್ತಾನದ ಸ್ವಾತಂತ್ರ್ಯವನ್ನು ಬೆಂಬಲಿಸುವಂತೆ ಅವರು ಭಾರತವನ್ನು ಒತ್ತಾಯಿಸಿದ್ದು, ಇದು ಕಾರ್ಯತಂತ್ರ ಮತ್ತು ನೈತಿಕ ಅನಿವಾರ್ಯತೆ ಎಂದು ಕರೆದಿದ್ದಾರೆ. ಮುಕ್ತ ಬಲೂಚಿಸ್ತಾನವು ಗ್ವಾದರ್ ಮೂಲಕ ಅರಬ್ಬಿ ಸಮುದ್ರಕ್ಕೆ ಪಾಕಿಸ್ತಾನದ ಪ್ರವೇಶವನ್ನು ಕಡಿತಗೊಳಿಸುತ್ತದೆ ಮತ್ತು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಅಡ್ಡಿಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.
ಬಲೂಚಿಸ್ತಾನದ ಹಿಂಗ್ಲಾಜ್ ಮಾತಾ ದೇವಾಲಯವನ್ನು ಉಲ್ಲೇಖಿಸಿರುವ ಅವರು, ಇದು ಸಾಂಸ್ಕೃತಿಕ ಪರಂಪರೆಯ ಸಂಕೇತವೆಂದು ಕರೆದಿದ್ದು, ವಸುಧೈವ ಕುಟುಂಬಕಂ"ಗಾಗಿ ನಮ್ಮ ಪರವಾಗಿ ನಿಲ್ಲುವಂತೆ ಒತ್ತಾಯಿಸಿದ್ದಾರೆ.
Advertisement