Aftermath of Bus-Truck Collision in Deoghar
ಅಪಘಾತದ ರಭಸಕ್ಕೆ ನಜ್ಜುಗುಜ್ಜಾದ ಬಸ್ ಹಾಗೂ ಟ್ರಕ್

ಜಾರ್ಖಂಡ್: ಭೀಕರ ಅಪಘಾತ; ಟ್ರಕ್ ಗೆ ಬಸ್ ಡಿಕ್ಕಿ,18 ಕನ್ವಾರಿಯಾ ಭಕ್ತರ ಸಾವು

ದಿಯೋಘರ್‌ನ ಮೋಹನ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಜಮುನಿಯಾ ಅರಣ್ಯದ ಬಳಿ ಮಂಗಳವಾರ ಮುಂಜಾನೆ 4.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ.
Published on

ಜಾರ್ಖಂಡ್: ಜಾರ್ಖಂಡ್ ನ ದಿಯೋಘರ್ ನಲ್ಲಿ ಇಂದು ಮುಂಜಾನೆ ಭೀಕರ ಅಪಘಾತ ಸಂಭವಿಸಿದೆ. ಗ್ಯಾಸ್ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಟ್ರಕ್ ಗೆ ಕನ್ವಾರಿಯಾ ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿದ್ದಾರೆ.

ದಿಯೋಘರ್‌ನ ಮೋಹನ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಜಮುನಿಯಾ ಅರಣ್ಯದ ಬಳಿ ಮಂಗಳವಾರ ಮುಂಜಾನೆ 4.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. 32 ಸೀಟುಗಳ ಬಸ್ ಕನ್ವಾರಿಯಾಗಳು ಪ್ರಯಾಣಿಸುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಇನ್ಸ್‌ಪೆಕ್ಟರ್ ಜನರಲ್ (ದುಮ್ಕಾ ವಲಯ) ಶೈಲೇಂದ್ರ ಕುಮಾರ್ ಸಿನ್ಹಾ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಆದಾಗ್ಯೂ, ಅಪಘಾತದಲ್ಲಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಸಂಚಾರ ವಿಭಾಗದ ಉಪ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮಣ್ ಪ್ರಸಾದ್ ತಿಳಿಸಿದ್ದಾರೆ.

ಈ ಮಧ್ಯೆ ಈ ಪ್ರದೇಶದ ಸಂಸದ ನಿಶಿಕಾಂತ್ ದುಬೆ, ಶ್ರಾವಣ ಮಾಸದ ಕನ್ವರ್ ಯಾತ್ರೆಯ ಸಂದರ್ಭದಲ್ಲಿ ಬಸ್ ಮತ್ತು ಟ್ರಕ್ ಅಪಘಾತದಲ್ಲಿ 18 ಭಕ್ತರು ಪ್ರಾಣ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ. ಮೃತಪಟ್ಟವರ ಗುರುತು ಇನ್ನೂ ಪತ್ತೆಯಾಗಿಲ್ಲ.

ಸದ್ಯ ಮೃತದೇಹಗಳನ್ನು ದಿಯೋಘರ್ ಸದರ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಗಾಯಾಳುಗಳೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳೀಯರ ಪ್ರಕಾರ, 20 ಕ್ಕೂ ಹೆಚ್ಚು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com