'ನೀರು-ರಕ್ತ ಒಟ್ಟಿಗೆ ಹರಿಯುವುದಿಲ್ಲ ಎಂದಿರಿ, ಪಾಕಿಸ್ತಾನ ಜೊತೆ ಕ್ರಿಕೆಟ್ ಹೇಗೆ ಆಡುತ್ತೀರಿ?; ಪಂದ್ಯ ವೀಕ್ಷಿಸಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ'

ಪಹಲ್ಗಾಮ್ ಹತ್ಯಾಕಾಂಡದಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರಿಗೆ ದೂರವಾಣಿ ಕರೆ ಮಾಡಿ ನಾವು ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಸೇಡು ತೀರಿಸಿಕೊಂಡಿದ್ದೇವೆ ಎಂದು ಹೇಳುವ ಧೈರ್ಯ ಕೇಂದ್ರ ಸರ್ಕಾರಕ್ಕಿದೆಯೇ?
 Asaduddin Owaisi
ಅಸಾದುದ್ದೀನ್ ಓವೈಸಿ
Updated on

ನವದೆಹಲಿ: ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಭಾರತ-ಪಾಕ್ ನಡುವಿನ ಕ್ರಿಕೆಟ್‌ ಪಂದ್ಯ ವೀಕ್ಷಿಸಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್‌ ಒವೈಸಿ ಹೇಳಿದ್ದಾರೆ.

ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಹಲ್ಗಾಮ್ ಹತ್ಯಾಕಾಂಡದಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರಿಗೆ ದೂರವಾಣಿ ಕರೆ ಮಾಡಿ ನಾವು ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಸೇಡು ತೀರಿಸಿಕೊಂಡಿದ್ದೇವೆ ಎಂದು ಹೇಳುವ ಧೈರ್ಯ ಕೇಂದ್ರ ಸರ್ಕಾರಕ್ಕಿದೆಯೇ ಎಂದು ಪ್ರಶ್ನಿಸಿದ್ದಾರೆ.

ರಕ್ತ ಹಾಗೂ ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ. ಮಾತುಕತೆ ಮತ್ತು ಭಯೋತ್ಪಾದನೆ ಕೂಡ ಏಕಕಾಲದಲ್ಲಿ ಸಂಭವಿಸಲು ಸಾಧ್ಯವಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಉಲ್ಲೇಖಿಸಿದ ಓವೈಸಿ, ‘ಭಾರತವು ಪಾಕಿಸ್ತಾನದೊಂದಿಗೆ ವ್ಯಾಪಾರ ವಹಿವಾಟು ನಿಲ್ಲಿಸಿದೆ. ಆದರೆ, ಶೇ 80ರಷ್ಟು ನೀರು ಪಾಕಿಸ್ತಾನಕ್ಕೆ ಹರಿಯುತ್ತಿದೆ’ ಎಂದು ತಿಳಿಸಿದ್ದಾರೆ.

ಮುಂದಿನ ತಿಂಗಳು ನಡೆಯಲಿರುವ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ–ಪಾಕ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿದ್ದು, ನೀವು (ಬಿಜೆಪಿ ನಾಯಕರು) ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಎದುರು ನೋಡುತ್ತಿದ್ದೀರಿ’ ಎಂದು ಓವೈಸಿ ಅವರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 Asaduddin Owaisi
ಪಹಲ್ಗಾಮ್ ದಾಳಿ: ಉಗ್ರರು ಪಾಕಿಸ್ತಾನದಿಂದಲೇ ಬಂದರೆಂದು ಏಕೆ ಭಾವಿಸುತ್ತೀರಿ?; ಚಿದಂಬರಂ ಹೇಳಿಕೆ, BJP ತೀವ್ರ ಕಿಡಿ

ಪಾಕಿಸ್ತಾನದೊಂದಿಗಿನ ವ್ಯಾಪಾರ ನಿಷೇಧ ಮತ್ತು ಜಲಪ್ರದೇಶಕ್ಕೆ ಅವರ ದೋಣಿಗಳ ಪ್ರವೇಶವನ್ನು ತಡೆಯುವ ಕ್ರಮಗಳನ್ನು ಉಲ್ಲೇಖಿಸಿದ ಓವೈಸಿ, ಅವರ ದೋಣಿಗಳು ನಮ್ಮ ನೀರಿನಲ್ಲಿ ಬರಲು ಸಾಧ್ಯವಿಲ್ಲವಾದರೆ, ಕ್ರಿಕೆಟ್ ಪಂದ್ಯವನ್ನು ಹೇಗೆ ಆಡುತ್ತೀರಿ? ಬೈಸರನ್ ಕಣಿವೆಯಲ್ಲಿ ಜನರನ್ನು ಕೊಂದವರ ಬಗ್ಗೆ ಸರ್ಕಾರಕ್ಕೆ ಯಾವುದೇ ಆತ್ಮಸಾಕ್ಷಿ ಇಲ್ಲವೇ? ನನ್ನ ಆತ್ಮಸಾಕ್ಷಿಯು ಆ ಪಂದ್ಯವನ್ನು ನೋಡಲು ಅನುಮತಿಸುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಸೇನೆ, ಐಎಸ್ಐ ಭಾರತವನ್ನು ದುರ್ಬಲಗೊಳಿಸಲು ಬಯಸುತ್ತಿವೆ. ಆದರೆ, ಎದುರಾಳಿಗಳನ್ನು ದುರ್ಬಲಗೊಳಿಸಲು ಭಾರತ ಸಾಧ್ಯವಿರುವ ಎಲ್ಲವನ್ನೂ ಮಾಡಬೇಕಿದೆ. ಆದರೆ, ಬುಲ್ಡೋಜರ್‌ಗಳನ್ನು ಚಲಾಯಿಸುವ ಮೂಲಕ ದೇಶದಲ್ಲಿ ದ್ವೇಷವನ್ನು ಸೃಷ್ಟಿಸಲಾಗುತ್ತಿದೆ ಎಂದು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಬಳಿಕ ಕೇಂದ್ರ ಸರ್ಕಾರವು ವಿದೇಶಕ್ಕೆ ಕಳುಹಿಸಿದ್ದ ನಿಯೋಗದ ಭಾಗವಾಗಿದ್ದ ಓವೈಸಿ ಬೇಸರ ಹೊರಹಾಕಿದ್ದಾರೆ.

ಪಹಲ್ಗಾಮ್ ಉಗ್ರರ ದಾಳಿ ತೀವ್ರ ವಿಷಾದದ ಸಂಗತಿ. ದಾಳಿಯನ್ನು ಯಾರು ಮಾಡಿದರು? ನಮ್ಮಲ್ಲಿ 7.5 ಲಕ್ಷ ಸೇನಾ ಸಿಬ್ಬಂದಿ ಹಾಗೂ ಅರೆಸೈನಿಕ ಪಡೆಗಳು ಇದ್ದರೂ ಕೂಡ ನಾಲ್ಕು ಇಲಿಗಳು (ಉಗ್ರರು) ಎಲ್ಲಿಂದ ಬಂದರು?, ಭಾರತೀಯರನ್ನು ಯಾಕೆ ಕೊಂದರು? ಯಾರ ಮೇಲೆ ಹೊಣೆಗಾರಿಕೆ ಹೊರಿಸಲಾಗುತ್ತಿದೆ ಎಂದು ಓವೈಸಿ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಶ್ವೇತಭವನದಿಂದ ಯುದ್ಧ ವಿರಾಮ ಘೋಷಿಸುವ ವಿದೇಶಿಯರನ್ನು ಒಪ್ಪಿಕೊಳ್ಳುವುದು ನಮ್ಮ ರಾಷ್ಟ್ರೀಯ ಹೆಮ್ಮೆಗೆ ಒಗ್ಗುತ್ತದೆಯೇ? ಇದು ನಮ್ಮ ಸೈನ್ಯ ಮತ್ತು ಪೈಲಟ್‌ಗಳಿಗೆ ಅವಮಾನವಲ್ಲವೇ? ಎಂದು ಓವೈಸಿ ಕೇಳಿದ್ದಾರೆ. ಅಮೆರಿಕವನ್ನು ಸ್ನೇಹಿತ ರಾಷ್ಟ್ರ ಎಂದು ಪರಿಗಣಿಸುವ ಭಾರತವು ಅವರಿಗೆ ಯಾವುದೇ ಪ್ರಶ್ನೆ ಕೇಳದಿರುವುದು ಯಾವ ರೀತಿಯ ಸ್ನೇಹ? ಎಂದು ಅವರು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com