
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಬುಧವಾರ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ನಾಯಕತ್ವ ಎಂದರೆ ಕೇವಲ ಕ್ರೆಡಿಟ್ ತೆಗೆದುಕೊಳ್ಳುವುದು ಮಾತ್ರವಲ್ಲ, ಜವಾಬ್ದಾರಿಯನ್ನು ತೆಗೆದುಕೊಳ್ಳುವುದು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಿಸಿರುವುದು ಪ್ರಧಾನಿಯವರ 'ಬೇಜವಾಬ್ದಾರಿ'ಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
'ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಗೆ ಪ್ರತಿಯಾಗಿ ಭಾರತದ ಆಪರೇಷನ್ ಸಿಂಧೂರ ಕುರಿತು ಲೋಕಸಭೆಯಲ್ಲಿ ನಡೆದ ವಿಶೇಷ ಚರ್ಚೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ಸಂಸದೆ, ಗೃಹ ಸಚಿವ ಅಮಿತ್ ಶಾ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ನನ್ನ ತಾಯಿಯ ಕಣ್ಣೀರಿನ ಬಗ್ಗೆಯೂ ಮಾತನಾಡಿದರು. ಆದರೆ, ಯುದ್ಧವನ್ನು ಏಕೆ ನಿಲ್ಲಿಸಲಾಯಿತು ಎಂದು ಉತ್ತರಿಸಲಿಲ್ಲ ಎಂದರು.
'ನಾಯಕತ್ವ ಎಂದರೆ ಕೇವಲ ಕ್ರೆಡಿಟ್ ಅನ್ನು ಪಡೆಯುವುದು ಮಾತ್ರವಲ್ಲ, ಜವಾಬ್ದಾರಿಯನ್ನೂ ತೆಗೆದುಕೊಳ್ಳಬೇಕು. ನಮ್ಮ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಯುದ್ಧವನ್ನು ಹಠಾತ್ತನೆ ನಿಲ್ಲಿಸಲಾಯಿತು ಮತ್ತು ಈ ನಿರ್ಧಾರವನ್ನು ಅಮೆರಿಕ ಅಧ್ಯಕ್ಷರು ಘೋಷಿಸಿದರು. ಇದು ನಮ್ಮ ಪ್ರಧಾನ ಮಂತ್ರಿಯ ಬೇಜವಾಬ್ದಾರಿಯನ್ನು ಪ್ರತಿಬಿಂಬಿಸುತ್ತದೆ' ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಪ್ರಧಾನಿ, ಗೃಹ ಸಚಿವರು, ರಕ್ಷಣಾ ಸಚಿವರು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರ ಜವಾಬ್ದಾರಿಯಲ್ಲವೇ. ಬೈಸರನ್ ಕಣಿವೆಗೆ ಸಾವಿರಾರು ಪ್ರವಾಸಿಗರು ಹೋಗುತ್ತಾರೆಂದು ಸರ್ಕಾರಕ್ಕೆ ತಿಳಿದಿರಲಿಲ್ಲವೇ? ಅಲ್ಲಿ ಏಕೆ ಭದ್ರತೆ ಇರಲಿಲ್ಲ? ಭದ್ರತೆ ಇಲ್ಲದೆಯೇ ಏಕೆ ಪ್ರವಾಸಿಗರಿಗೆ ಅವಕಾಶ ನೀಡಲಾಯಿತು' ಎಂದು ಪ್ರಶ್ನಿಸಿದರು.
ಇಂತಹ ಭೀಕರ ಭಯೋತ್ಪಾದಕ ದಾಳಿ ನಡೆಯಲಿದೆ ಮತ್ತು ಪಾಕಿಸ್ತಾನದಲ್ಲಿ ದಾಳಿಯ ಸಂಚು ರೂಪಿಸಲಾಗುತ್ತಿದೆ ಎಂದು ಯಾವುದೇ ಸರ್ಕಾರಿ ಸಂಸ್ಥೆಗೆ ತಿಳಿದಿರಲಿಲ್ಲವೇ? ಇದು ನಮ್ಮ ಸರ್ಕಾರ ಮತ್ತು ಗುಪ್ತಚರ ಸಂಸ್ಥೆಗಳ ದೊಡ್ಡ ವೈಫಲ್ಯ. ಇದರ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ? ಯಾರಾದರೂ ರಾಜೀನಾಮೆ ನೀಡಿದ್ದಾರೆಯೇ? ಅವರು ಹಿಂದಿನದನ್ನು ಮಾತನಾಡುತ್ತಲೇ ಇರುತ್ತಾರೆ. ಆದರೆ, ವರ್ತಮಾನದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಯಾರು ಉತ್ತರಿಸುತ್ತಾರೆ' ಎಂದು ಕೇಳಿದರು.
Advertisement