
ನವದೆಹಲಿ: ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ಭಾರತದ ಸರಕುಗಳ ಮೇಲೆ ಶೇ. 25 ರಷ್ಟು ತೆರಿಗೆ ಮತ್ತು ದಂಡ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಿದ್ದಾರೆ.
ಟ್ರಂಪ್ ಘೋಷಣೆ ನಂತರ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಒಂದು ಪ್ರಕಟಣೆ ಬಿಡುಗಡೆ ಮಾಡಿದ್ದು, ಸರ್ಕಾರವು ಅಮೆರಿಕ ಅಧ್ಯಕ್ಷರ ಹೇಳಿಕೆಯ ಪರಿಣಾಮಗಳನ್ನು ಅಧ್ಯಯನ ಮಾಡುತ್ತಿದೆ ಎಂದು ತಿಳಿಸಿದೆ.
"ಭಾರತ ಮತ್ತು ಅಮೆರಿಕ ಕಳೆದ ಕೆಲವು ತಿಂಗಳುಗಳಿಂದ ನ್ಯಾಯಯುತ, ಸಮತೋಲಿತ ಮತ್ತು ಪರಸ್ಪರ ಪ್ರಯೋಜನಕಾರಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಮುಕ್ತಾಯಗೊಳಿಸುವ ಕುರಿತು ಮಾತುಕತೆಯಲ್ಲಿ ತೊಡಗಿವೆ. ನಾವು ಆ ಉದ್ದೇಶಕ್ಕೆ ಬದ್ಧರಾಗಿದ್ದೇವೆ" ಎಂದು ಕೇಂದ್ರ ಹೇಳಿದೆ.
"ನಮ್ಮ ರೈತರು, ಉದ್ಯಮಿಗಳು ಮತ್ತು MSME ಗಳ ಹಿತಾಸಕ್ತಿಯನ್ನು ರಕ್ಷಿಸಲು ಮತ್ತು ಉತ್ತೇಜಿಸಲು ಸರ್ಕಾರವು ಅತ್ಯಂತ ಪ್ರಾಮುಖ್ಯತೆಯನ್ನು ನೀಡುತ್ತದೆ" ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.
"ಯುಕೆ ಜೊತೆಗಿನ ಇತ್ತೀಚಿನ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ ಸೇರಿದಂತೆ ಇತರ ವ್ಯಾಪಾರ ಒಪ್ಪಂದಗಳಂತೆ ನಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ಭದ್ರಪಡಿಸಿಕೊಳ್ಳಲು ಸರ್ಕಾರ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ" ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಭಾರತ ರಷ್ಯಾದಿಂದ ತೈಲ ಖರೀದಿಯ ಬಗ್ಗೆ ಟ್ರಂಪ್ ಅವರ ಉಲ್ಲೇಖವು ಯುಎಸ್ ಸೆನೆಟ್ ಮತ್ತು ಪ್ರತಿನಿಧಿಗಳ ಸಭೆಯಲ್ಲಿ ಪರಿಚಯಿಸಲಾದ ರಷ್ಯಾದ ನಿರ್ಬಂಧ ಕಾಯ್ದೆ, 2025 ರ ಹಿನ್ನೆಲೆಯಲ್ಲಿ ಬಂದಿದೆ. ರಷ್ಯಾದಿಂದ ತೈಲ ಅಥವಾ ಇತರ ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿಸುವ ದೇಶಗಳ ಮೇಲೆ ಶೇ. 500 ರಷ್ಟು ಸುಂಕ ವಿಧಿಸಲು ಇದು ಪ್ರಸ್ತಾಪಿಸುತ್ತದೆ.
ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಅಮೆರಿಕ ಕಳೆದ ವಾರ ವಾಷಿಂಗ್ಟನ್‌ನಲ್ಲಿ ಐದನೇ ಸುತ್ತಿನ ಮಾತುಕತೆ ನಡೆಸಿದ್ದವು. ಆದರೆ ಯಾವುದೇ ಒಪ್ಪಂದಕ್ಕೆ ಬರಲು ವಿಫಲವಾಗಿದ್ದವು.
ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಆಗಸ್ಟ್ 1 ರಿಂದ ಶೇ.25 ರಷ್ಟು ಸುಂಕ ವಿಧಿಸಲಾಗುವುದು. ಭಾರತ ನಮ್ಮ ಮಿತ್ರ ರಾಷ್ಟ್ರವಾಗಿದ್ದರೂ, ಅವರೊಂದಿಗೆ ನಮ್ಮ ವ್ಯವಹಾರ ಅಷ್ಟಕ್ಕಷ್ಟೆ. ಅಮೆರಿಕದ ಸರಕುಗಳ ಮೇಲೆ ಭಾರತ ಅಧಿಕ ಸುಂಕ ವಿಧಿಸುತ್ತಿದೆ. ಎಲ್ಲ ದೇಶಗಳಿಗೆ ಹೋಲಿಸಿದರೆ ಅವರದ್ದು ಅಧಿಕ ತೆರಿಗೆಯಾಗಿದೆ ಎಂದು ಟ್ರಂಪ್, ತಮ್ಮದೇ ಒಡೆತನದ ಟ್ರುತ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಅಲ್ಲದೆ, ಭಾರತ ಯಾವಾಗಲೂ ತಮ್ಮ ಮಿಲಿಟರಿ ಉಪಕರಣಗಳಲ್ಲಿ ಹೆಚ್ಚಿನ ಭಾಗವನ್ನು ರಷ್ಯಾದಿಂದ ಖರೀದಿಸಿದ್ದಾರೆ. ಚೀನಾದ ಬಳಿಕ ರಷ್ಯಾದಿಂದ ಅತ್ಯಧಿಕ ಪ್ರಮಾಣದಲ್ಲಿ ಇಂಧನ ಖರೀದಿಸುವ ರಾಷ್ಟ್ರವಾಗಿದೆ. ರಷ್ಯಾವು, ಉಕ್ರೇನ್‌ನಲ್ಲಿ ಹತ್ಯಾಕಾಂಡ ನಡೆಸುತ್ತಿದೆ. ಇದನ್ನು ನಿಲ್ಲಿಸಬೇಕು ಎಂದು ಎಲ್ಲರೂ ಬಯಸುವ ವೇಳೆ ಭಾರತದ ಈ ಧೋರಣೆ ಒಳ್ಳೆಯದಲ್ಲ. ಹೀಗಾಗಿ, ಭಾರತವು ಆಗಸ್ಟ್‌ನಿಂದ ತನ್ನ ಸರಕುಗಳನ್ನು ಅಮೆರಿಕಕ್ಕೆ ರಫ್ತು ಮಾಡುವಾಗ 25 ರಷ್ಟು ಪ್ರತಿಶತ ಸುಂಕವನ್ನು ಪಾವತಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
Advertisement