
ನವದೆಹಲಿ: ಜೂನ್ 1 ರಿಂದ 30ರವರೆಗೆ 'ಆಪರೇಷನ್ ಸಿಂಧೂರ' ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ರಕ್ಷಣಾ ಸಚಿವಾಲಯ ಭಾನುವಾರ ಪ್ರಕಟಿಸಿದೆ.
X ನಲ್ಲಿನ ಪೋಸ್ಟ್‌ನಲ್ಲಿ ಸಚಿವಾಲಯವು, ಅಗ್ರ ಮೂರು ವಿಜೇತರಿಗೆ ತಲಾ 10,000 ರೂ. ನಗದು ಬಹುಮಾನ ನೀಡಲಾಗುವುದು ಮತ್ತು ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುವ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಲು ವಿಶೇಷ ಅವಕಾಶ ಪಡೆಯುತ್ತಾರೆ ಎಂದು ತಿಳಿಸಿದೆ.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವಿಗೀಡಾಗಿದ್ದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ನೆಲಗಳನ್ನು ಗುರಿಯಾಗಿಸಿ ಮೇ 7ರಂದು ಆಪರೇಷನ್ ಸಿಂಧೂರವನ್ನು ಪ್ರಾರಂಭಿಸಲಾಯಿತು.
ಭಯೋತ್ಪಾದನೆಯ ವಿರುದ್ಧ ಭಾರತ 'ಹೊಸ ಕೆಂಪು ರೇಖೆ'ಯನ್ನು ಎಳೆದಿದೆ ಎಂದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹೇಳಿದೆ. ಭಯೋತ್ಪಾದನೆಗೆ, ವಿಶೇಷವಾಗಿ ಗಡಿಯಾಚೆಗಿನ ಭಯೋತ್ಪಾದನೆಗೆ ಭಾರತ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರಲ್ಲಿ ಆಪರೇಷನ್ ಸಿಂಧೂರ ಇದೀಗ ಉದಾಹರಣೆಯಾಗಿದೆ ಎಂದು ಪ್ರತಿಪಾದಿಸಿದೆ.
'ರಕ್ಷಣಾ ಸಚಿವಾಲಯವು ತಮ್ಮ ಧ್ವನಿಯನ್ನು ಕೇಳುವಂತೆ ಮಾಡಲು ಯುವ ಮನಸ್ಸುಗಳನ್ನು ಆಹ್ವಾನಿಸುತ್ತದೆ! 'ಆಪರೇಷನ್ ಸಿಂಧೂರ - ಭಯೋತ್ಪಾದನೆಯ ವಿರುದ್ಧ ಭಾರತದ ನೀತಿಯನ್ನು ಮರು ವ್ಯಾಖ್ಯಾನಿಸುವುದು' ಎಂಬ ವಿಷಯ ಕುರಿತು ರಕ್ಷಣಾ ಸಚಿವಾಲಯ ಮತ್ತು ಭಾರತ ಸರ್ಕಾರದ ದ್ವಿಭಾಷಾ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ' ಎಂದು ಸಚಿವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜೂನ್ 1 ರಿಂದ 30ರವರೆಗೆ ಸ್ಪರ್ಧೆ ನಡೆಯಲಿದೆ. ಯಾವುದೇ ವ್ಯಕ್ತಿ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಪ್ರಬಂಧ ಬರೆಯಬಹುದಾಗಿದೆ ಎಂದು ಅದು ಹೇಳಿದೆ. ಸ್ಪರ್ಧೆಯ ಬಗ್ಗೆ ವಿವರಗಳು ಮತ್ತು ಆಪರೇಷನ್ ಸಿಂಧೂರದ ಲೋಗೋ ಹೊಂದಿರುವ ಪೋಸ್ಟರ್ ಅನ್ನು ಸಹ ಹಂಚಿಕೊಂಡಿದೆ.
Advertisement