
ಬಿಕಾನೇರ್: 'ಸಿಂಧೂರ' ಗನ್‌ಪೌಡರ್ ಆದಾಗ ಏನಾಗುತ್ತದೆ ಎಂಬುದನ್ನು ಇದೀಗ ನಮ್ಮ ದೇಶದ ಶತ್ರುಗಳು ತಿಳಿದುಕೊಂಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಪಾಕಿಸ್ತಾನವು ಮಂಡಿಯೂರಬೇಕಾದಷ್ಟು ಶೌರ್ಯವನ್ನು ತೋರಿಸಿದ್ದಕ್ಕಾಗಿ ಭಾರತದ ಸಶಸ್ತ್ರ ಪಡೆಗಳನ್ನು ಗುರುವಾರ ಶ್ಲಾಘಿಸಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯ ನಂತರ ಪ್ರಾರಂಭಿಸಲಾದ 'ಆಪರೇಷನ್ ಸಿಂಧೂರ' ನಂತರ ರಾಜಸ್ಥಾನದಲ್ಲಿ ತಮ್ಮ ಮೊದಲ ಸಾರ್ವಜನಿಕ ಭಾಷಣದಲ್ಲಿ, ಪ್ರಧಾನಿ ಪಾಕಿಸ್ತಾನವನ್ನು ಟೀಕಿಸಿದರು ಮತ್ತು ಏಪ್ರಿಲ್ 22 ರಂದು ನಡೆದ ದಾಳಿಗೆ ಪ್ರತಿಕ್ರಿಯೆಯಾಗಿ, 'ನಾವು 22 ನಿಮಿಷಗಳಲ್ಲಿ ಒಂಬತ್ತು ದೊಡ್ಡ ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದ್ದೇವೆ' ಎಂದು ಹೇಳಿದರು.
'ಸಿಂಧೂರವು 'ಬರೂದ್' (ಗನ್ ಪೌಡರ್) ಆಗಿ ಬದಲಾದಾಗ ಏನಾಗುತ್ತದೆ ಎಂಬುದನ್ನು ಜಗತ್ತು ಮತ್ತು ದೇಶದ ಶತ್ರುಗಳು ನೋಡಿದ್ದಾರೆ. ಭಾರತ ಪರಮಾಣು ಬೆದರಿಕೆಗಳಿಗೆ ಹೆದರುವುದಿಲ್ಲ ಮತ್ತು ದೇಶದ ಮೇಲೆ ಭಯೋತ್ಪಾದಕ ದಾಳಿ ನಡೆದರೆ ಅದು ಸೂಕ್ತ ಉತ್ತರವನ್ನು ನೀಡುತ್ತದೆ. 'ಸಮಯ ಮತ್ತು ಯಾವ ವಿಧಾನ ಎಂಬುದನ್ನು ನಮ್ಮ ಸಶಸ್ತ್ರ ಪಡೆಗಳು ನಿರ್ಧರಿಸುತ್ತವೆ' ಎಂದು ಅವರು ಬಿಕಾನೇರ್‌ನ ಪಲಾನಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಹೇಳಿದರು.
'ನಮ್ಮ ಸರ್ಕಾರ ಮೂರು ಸಶಸ್ತ್ರ ಪಡೆಗಳಿಗೂ ಮುಕ್ತ ಸ್ವಾತಂತ್ರ್ಯ ನೀಡಿತು. ಅವರು ಒಟ್ಟಾಗಿ ಅಂತಹ ಬಲೆಯನ್ನು ಹೆಣೆದರು. ಈ ಮೂಲಕ ಪಾಕಿಸ್ತಾನವು ಮಂಡಿಯೂರುವಂತೆ ಮಾಡಲಾಯಿತು' ಎಂದು ಅವರು ಹೇಳಿದರು.
ಬಿಕಾನೆರ್‌ನ ನಾಲ್ ವಾಯುನೆಲೆಯನ್ನು ಗುರಿಯಾಗಿಸಲು ಪಾಕಿಸ್ತಾನ ಪ್ರಯತ್ನಿಸಿತ್ತು. ಆದರೆ, ಅದಕ್ಕೆ ಯಾವುದೇ ಹಾನಿ ಮಾಡಲು ಸಾಧ್ಯವಾಗಲಿಲ್ಲ. ಆದರೆ, ಪಾಕಿಸ್ತಾನದ ರಹಿಮ್ಯಾರ್ ಖಾನ್ ವಾಯುನೆಲೆ ಮತ್ತೆ ಯಾವಾಗ ತೆರೆಯುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಅದು ಐಸಿಯುನಲ್ಲಿದೆ. ನಮ್ಮ ದಾಳಿಯಿಂದಾಗಿ ಅದು ನಾಶವಾಗಿದೆ' ಎಂದರು.
'ಭಾರತದ ವಿರುದ್ಧ ನೇರ ಹೋರಾಟದಲ್ಲಿ ಪಾಕಿಸ್ತಾನ ಎಂದಿಗೂ ಗೆಲ್ಲಲು ಸಾಧ್ಯವಿಲ್ಲ. ನೇರ ಯುದ್ಧ ಆದಾಗಲೆಲ್ಲ ಪಾಕಿಸ್ತಾನ ಮತ್ತೆ ಮತ್ತೆ ಸೋಲನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿಯೇ ಪಾಕಿಸ್ತಾನ ಭಯೋತ್ಪಾದನೆಯನ್ನು ಭಾರತದ ವಿರುದ್ಧ ಹೋರಾಡಲು ಅಸ್ತ್ರವನ್ನಾಗಿ ಮಾಡಿಕೊಂಡಿದೆ' ಎಂದು ಅವರು ಹೇಳಿದರು.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವಿಗೀಡಾಗಿದ್ದಕ್ಕೆ ಪ್ರತಿಯಾಗಿ ಭಾರತ ಮೇ 7ರಂದು ಮುಂಜಾನೆ 'ಆಪರೇಷನ್ ಸಿಂಧೂರ' ಅಡಿಯಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿತು.
ಭಾರತದ ಕಾರ್ಯಾಚರಣೆಯ ನಂತರ, ಪಾಕಿಸ್ತಾನ ಮೇ 8, 9 ಮತ್ತು 10 ರಂದು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಭಾರತೀಯ ಪಡೆಗಳು ಹಲವಾರು ಪಾಕಿಸ್ತಾನಿ ಸೇನಾ ನೆಲೆಗಳ ಮೇಲೆ ಉಗ್ರ ಪ್ರತಿದಾಳಿ ನಡೆಸಿದವು.
ಗಡಿಯಾಚೆಗಿನ ನಾಲ್ಕು ದಿನಗಳ ತೀವ್ರ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ನಂತರ ಮಿಲಿಟರಿ ಮುಖಾಮುಖಿಯನ್ನು ಕೊನೆಗೊಳಿಸಲು ಭಾರತ ಮತ್ತು ಪಾಕಿಸ್ತಾನ ಮೇ 10 ರಂದು ಕದನ ವಿರಾಮ ಒಪ್ಪಂದ ಮಾಡಿಕೊಂಡವು.
Advertisement